ಗುವಾಹಟಿ: ಟೋಕಿಯೋ ಒಲಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಖಚಿತವಾಗುತ್ತಿದ್ದಂತೆ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್ ತವರು ಬಾರೊಮುಖಿಯಾಗೆ ಅಸ್ಸಾಂ ಸರ್ಕಾರ ಎರಡನೇ ಬಾರಿಗೆ ರಸ್ತೆ ನಿರ್ಮಾಣ ಕಾರ್ಯವನ್ನು ಮಾಡುತ್ತಿದೆ.
3.5 ಕಿಮೀ ರಸ್ತೆಯು ಬಾಕ್ಸರ್ ಹಳ್ಳಿಯೊಂದಿಗೆ ಉತ್ತರ ಅಸ್ಸಾಂನ ಗೋಲಘಾಟ್ ಜಿಲ್ಲೆಯ ಬರ್ಪಾಥರ್ ಪಟ್ಟಣವನ್ನು ಸಂಪರ್ಕಿಸುತ್ತದೆ. ಆ ಹಳ್ಳಿಯಲ್ಲಿ ಸುಮಾರು 2 ಸಾವಿರ ಜನಸಂಖ್ಯೆಯಿದೆ. ಎರಡು ದಿನಗಳ ಹಿಂದೆ ರಸ್ತೆ ಕಾಮಗಾರಿಯನ್ನು ಆರಂಭಿಸಲಾಗಿದೆ.
ಒಲಂಪಿಕ್ಸ್ ಕ್ರೀಡಾಕೂಟ ಆರಂಭಕ್ಕೂ ಮುನ್ನ ಸ್ಥಳೀಯರು ಲೊವ್ಲಿನಾ ಗ್ರಾಮದಲ್ಲಿನ ಮೂಲಸೌಕರ್ಯ ಸಮಸ್ಯೆಯನ್ನು ಎತ್ತಿ ತೋರಿಸಿದ್ದರು. ಇದರ ಮೊದಲ ವರದಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿಯಾಗಿತ್ತು. ಲೊವ್ಲಿನಾ ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ಹಿಮಾ ದಾಸ್ ಊರು ಕಂಧುಲಿಮಾರಿ ಪರಿವರ್ತನೆಯಾದಂತೆ ನಮ್ಮ ಹಳ್ಳಿಯೂ ಪರಿವರ್ತನೆಯಾಗಲಿದೆ ಎಂದು ಅವರು ಆಶಾವಾದಿಯಾಗಿದ್ದರು, ಇದೀಗ ಪದಕ ಖಚಿತವಾಗಿದ್ದು, ಆಕೆ ಸೆಮಿಫೈನಲ್ ತಲುಪಿರುವುದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಪ್ರದೇಶವು ಸರುಪಥರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ಕಾಂಗ್ರೆಸ್ ಶಾಸಕರು ಹೆಚ್ಚಾಗಿ ಇಲ್ಲಿ ಪ್ರತಿನಿಧಿಯಾಗಿದ್ದಾರೆ. ಮಣ್ಣಿನ ರಸ್ತೆಗೆ ಕಾಂಕ್ರಿಟ್ ಹಾಕಲಾಗುತ್ತಿದೆ ಎಂದು ಸ್ಥಳೀಯ ಬಿಜೆಪಿ ಶಾಸಕ ಬಿಸ್ವಜಿತ್ ಪುಕಾನ್ ತಿಳಿಸಿದರು. ಲೊವ್ಲಿನಾ ಸೆಮಿಫೈನಲ್ ಪ್ರವೇಶಿಸಿದ ನಂತರ ಆಕೆಯ ಮನೆಗೆ ತೆರಳಿದ್ದೆ, ಇಡೀ ರಾತ್ರಿ ಸುರಿದ ಮಳೆಯಿಂದಾಗಿ ರಸ್ತೆ ಪರಿಸ್ಥಿತಿ ತೀವ್ರ ಹದೆಗೆಟ್ಟಿತ್ತು. ಹಾಗಾಗೀ ಲೊವ್ಲಿನಾ ಹಿಂತಿರುಗಿ ಬರುವಷ್ಟರಲ್ಲಿ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ನಿರ್ಧರಿಸುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಅವರು ತಿಳಿಸಿದರು.
ವಾಹನಗಳಿಗೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲಾಗುತ್ತಿದೆ. ಸರ್ಕಾರದಿಂದ ಹಣ ಮಂಜೂರಾಗದಿದ್ದರೆ, ನನ್ನ ಜೀಬಿನಿಂದ ವೆಚ್ಚ ಮಾಡುತ್ತೇನೆ ಎಂದು ಹೇಳಿದ ಶಾಸಕರು, ಈ ಪ್ರದೇಶದಲ್ಲಿ ಮೂಲಸೌಕರ್ಯ ಸಮಸ್ಯೆ ತೀವ್ರವಾಗಿರುವುದಾಗಿ ತಿಳಿಸಿದರು. ಇದೇ ಪ್ರದೇಶದಿಂದ ಬಂದಿರುವ ನನಗೆ ಸ್ಥಳೀಯ ಸಮಸ್ಯೆಗಳ ಅರಿವಿದೆ ಆದರೆ, ನಾನು ಶಾಸಕನಾಗಿ ಆಯ್ಕೆಯಾಗಿ ಕೇವಲ ಮೂರು ತಿಂಗಳಾಗಿದೆ ಎಂದು ಪುಕಾನ್ ಹೇಳಿದರು.
ಬಾಕ್ಸರ್ ಸಾಧನೆಯಿಂದ ನಮಗೆ ರಸ್ತೆ ತಂದುಕೊಟ್ಟಿದೆ ಎಂದು ಗ್ರಾಮಸ್ಥರು ಸಂತಸದಲ್ಲಿರುವುದಾಗಿ ಲೊವ್ಲಿನಾ ತಂದೆ ಟಿಕೆನ್ ಬೊರ್ಗೊಹೈನ್ ಹೇಳಿದ್ದಾರೆ. ಊರಿನ ಕಾಂಕ್ರೀಟ್ ರಸ್ತೆ ನೋಡಿ ಜನರು ಅತ್ಯಂತ ಸಂತೋಷದಲ್ಲಿದ್ದಾರೆ. ರಾಜ್ಯ ಸರ್ಕಾರ ಹಾಗೂ ಶಾಸಕರಿಗೆ ಧನ್ಯವಾದ ಹೇಳುವುದಾಗಿ ಬೊರ್ಗೊಹೈನ್ ತಿಳಿಸಿದರು. ಲೊವ್ಲಿನಾ ಪದಕ ಪಡೆದುಕೊಂಡಿದ್ದಾರೆ ಅದಕ್ಕಾಗಿ, ಸರ್ಕಾರ ನಮಗೆ ರಸ್ತೆಯನ್ನು ನೀಡುತ್ತಿದೆ. ನಾನು ಅದನ್ನು ನನ್ನ ಮಗಳಿಗೆ ಉಡುಗೊರೆ ಎಂದು ಪರಿಗಣಿಸುತ್ತೇನೆ ಎಂದು ಹೇಳಿದರು.
ಸರ್ಕಾರ ಇತರ ಮೂಲಸೌಕರ್ಯಗಳನ್ನು ಅನುಷ್ಠಾನಗೊಳಿಸುವ ಭರವಸೆ ಹೊಂದಿರುವುದಾಗಿ ಸ್ಥಳೀಯ ಹೊರೆನ್ ಗೋಗೊಯ್ ಹೇಳಿದರು. ಹಾಸಿಗೆಗಳೊಂದಿಗೆ ಆಸ್ಪತ್ರೆ, ಕುಡಿಯುವ ನೀರು, ಆಟದ ಮೈದಾನ, ಜಿಮ್, ಬಾಕ್ಸಿಂಗ್ ರಿಂಗ್ ನಂತಹ ಸೌಕರ್ಯಗಳು ನಮಗೆ ಅಗತ್ಯವಾಗಿದೆ. ಲೊವ್ಲಿನಾ ವಿಶ್ವ ಮತ್ತು ನಮ್ಮ ಕ್ಷೇತ್ರವನ್ನು ಗೆದ್ದಿದ್ದಾರೆ. ಆದರೆ, ಒಂದೇ ಒಂದು ಬಾಕ್ಸಿಂಗ್ ರಿಂಗ್ ಇಲ್ಲ ಎಂದರು.