ಕಾಸರಗೋಡು: ರಾಜ್ಯದಲ್ಲಿ ಸಮಾಜ ಕಲ್ಯಾಣ ಪಿಂಚಣಿ ಯಾ ವೆಲ್ಫೇರ್ ಫಂಡ್ ಪಿಂಚಣಿ ಲಭಿಸದೇ ಇರುವ ಮಂದಿಗೆ ಆರ್ಥಿಕ ಸಹಾಯ ಮಾರ್ಗಸೂಚಿ ಪ್ರಕಟಗೊಂಡಿದೆ.
ರಾಜ್ಯ ಸರಕಾರ ಘೋಷಿಸಿರುವ ಆರ್ಥಿಕ ಕೈಸಹಾಯವು ಸಹಕಾರಿ ಸಂಸ್ಥೆಗಳ ಮೂಲಕ ಓಣಂ ಹಬ್ಬಕ್ಕೆ ಮುಂಚಿತವಾಗಿ ವಿತರಣೆ ನಡೆಸಲು ವಿಶೇಷ ಆದೇಶವನ್ನು ಸಹಕಾರಿ ಸಚಿವ ವಿ.ಎನ್.ವಲ್ಸನ್ ಹೊರಡಿಸಿದ್ದಾರೆ. ಬಿ.ಪಿ.ಎಲ್ ಪಟ್ಟಿಯಲ್ಲಿ ಸೇರಿರುವ ಮತ್ತು ಅಂತ್ಯೋದಯ ಅನ್ನ ಯೋಜನೆಯಲ್ಲಿ ಅಳವಡಗೊಂಡವರಿಗೆ ಒಂದು ಸಾವಿರ ರೂ.ನ ಸಹಾಯ ಲಭಿಸಲಿದೆ. ಫಲಾನುಭವಿಗಳ ಪಟ್ಟಿ ಜಿಲ್ಲಾ ಮಟ್ಟದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಪ್ರಕಾರ ವಿಂಗಡಿಸಿ ಜಾಯಿಂಟ್ ರೆಜಿಸ್ತ್ರಾರ್ ಅವರಿಗೆ ತುರ್ತಾಗಿ ಒದಗಿಸಲಾಗುವುದು.
ಫಲಾನುಭವಿಗಳು ಆಧಾರ್ ಕಾರ್ಡ್, ಇನ್ನಿತರ ಗುರುತುಚೀಟಿ ಹಾಜರುಪಡಿಸಿ ಈ ಸಹಾಯ ಪಡೆದುಕೊಳ್ಳಬಹುದು. ಸಹಾಯ ವಿತರಣೆ ನಡೆಸುವ ಸಹಕಾರಿ ಸಂಘಗಳು ಪೂರ್ಣರೂಪದಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಬೇಕು. ಸಮಾಜ ಸುರಕ್ಷೆ ಪಿಂಚಣಿ ವಿತರಣೆ ನಡೆಸುವ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿ ರಚಿಸಲಾದ ಮಾನಿಟರಿಂಗ್ ವ್ಯವಸ್ಥೆ ಈ ಯೋಜನೆಗೂ ಅನ್ವಯವಾಗಲಿದೆ. ಸಹಕಾರಿ ಸಂಘ ರೆಜಿಸ್ತ್ರಾರ್ ಕಚೇರಿಯಲ್ಲಿ ಅಡೀಷನಲ್ ರೆಜಿಸ್ತ್ರಾರ್ ನಲ್ಲಿ ಸೆಲ್ ರಚಿಸಲಾಗುವುದು. ಪ್ರತಿ ಜಿಲ್ಲೆಯ ಹೊಣೆ ಪ್ರತಿ ಸಿಬ್ಬಂದಿಗೆ ನೀಡುವಂತೆ ಆದೇಶಿಸಲಾಗಿದೆ. ಆರ್ಥಿಕ ಸಹಾಯ ವಿತರಣೆ ನಡೆಸುವ ಸಿಬ್ಬಂದಿಗೆ ಸಮಾಜಕಲ್ಯಾಣ ಪಿಂಚಣಿ ವಿತರಣೆ ನಡೆಸುವ ಇನ್ಸೆಂಟೀವ್ ನೀಡಲೂ ಸಹಕಾರಿ ಇಲಾಖೆ ತೀರ್ಮಾನಿಸಿದೆ.