ಕೊಚ್ಚಿ: ತನ್ನ ತಂದೆಯೊಂದಿಗೆ ಶಬರಿಮಲೆ ದೇಗುಲ ದರ್ಶನಕ್ಕೆ ತೆರಳಲು ಬಾಲಕಿಯೊಬ್ಬಳಿಗೆ ಕೇರಳ ಹೈಕೋರ್ಟ್ ಮಂಗಳವಾರ ಅನುಮತಿ ನೀಡಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ ಆದೇಶ ಮತ್ತು 'ಕೋವಿಡ್ ಲಸಿಕೆ ಹಾಕಿಸಿಕೊಂಡ ವ್ಯಕ್ತಿಗಳ ಜೊತೆಯಲ್ಲಿ ಮಕ್ಕಳು ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸಬಹುದು' ಎಂಬ ರಾಜ್ಯ ಸರ್ಕಾರ ಆಗಸ್ಟ್ 4 ರಂದು ಹೊರಡಿಸಿರುವ ಆದೇಶವನ್ನು ಆಧರಿಸಿ ನ್ಯಾಯಾಲಯ ಈ ಅನುಮತಿ ನೀಡಿದೆ.
ಒಂಬತ್ತು ವರ್ಷದ ಬಾಲಕಿಯು ಆಗಸ್ಟ್ 23 ರಂದು ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಲು ಅನುಮತಿ ನೀಡುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಳು. ಆಕೆಯ ಮನವಿಯನ್ನು ಪರಿಶೀಲಿಸಿದ ನ್ಯಾಯಾಲಯ ಈ ರೀತಿ ಆದೇಶ ನೀಡಿದೆ.
ಬಾಲಕಿಯ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ, 'ಆಕೆ ಹತ್ತು ವರ್ಷ ತುಂಬುವ ಮೊದಲೇ ಶಬರಿಮಲೆಗೆ ಹೋಗಲು ಬಯಸಿದ್ದಾಳೆ, ಮುಂದೆ ನಾಲ್ಕು ದಶಕಗಳ ಕಾಲ ಶ್ರೀಕ್ಷೇತ್ರಕ್ಕೆ ಭೇಟಿ ನೀಡಲು ಆಕೆಗೆ ಸಾಧ್ಯವಾಗದಿರಬಹುದು' ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, 'ಅರ್ಜಿದಾರರ ಅಭಿಪ್ರಾಯವನ್ನು ಪರಿಗಣಿಸಿ, ಆಗಸ್ಟ್ 23ರಂದು ತನ್ನ ತಂದೆಯೊಂದಿಗೆ ಶಬರಿಮಲೆಗೆ ತೆರಳಲು ಬಾಲಕಿಗೆ ಅನುಮತಿ ನೀಡಿತು.