ಮಂಗಳೂರು: ಕರ್ನಾಟಕದಲ್ಲಿ ಕೊರೊನಾ ಸೋಂಕು ಮೂರನೇ ಅಲೆಯ ಆತಂಕ ಹೆಚ್ಚಾಗುತ್ತಿದೆ. ಈಗಾಗಲೇ ಎರಡು ಅಲೆಗಳ ಹೊಡೆತಕ್ಕೆ ಅದೆಷ್ಟೋ ಜನಗಳು ಪ್ರಾಣ ಕಳೆದುಕೊಂಡಿದ್ದರ ಪರಿಣಾಮ ಹಲವು ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.
ಮಹಾಮಾರಿ ಕೊರೊನಾ ಸೋಂಕಿನಿಂದಾದ ನಷ್ಟ ಅಷ್ಟಿಷ್ಟಲ್ಲ. ತಂದೆ- ತಾಯಿ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ. ಈ ನಡುವೆ ಮಂಗಳೂರಿನಲ್ಲಿ ಕೊರೊನಾ ಮತ್ತು ಬ್ಲ್ಯಾಕ್ ಫಂಗಸ್‌ಗೆ ಹೆದರಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಮಂಗಳೂರು ಹೊರವಲಯದ ಚಿತ್ರಾಪುರದ ರಹೆಜಾ ಅಪಾರ್ಟ್‌ಮೆಂಟ್‌ನಲ್ಲಿ ರಮೇಶ್ ಕುಮಾರ್ ಮತ್ತು ಗುಣ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಂಪತಿ ಆತ್ಮಹತ್ಯೆಗೆ ಮುನ್ನ ಮಂಗಳೂರು ಪೊಲೀಸ್ ಆಯುಕ್ತರಿಗೆ ಫೋನ್ ಕರೆ ಮಾಡಿದ್ದರು. ಪತ್ನಿ ಗುಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಾನೂ ಕೂಡಾ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ರಮೇಶ್ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ಗೆ ಇಂದು (ಆಗಸ್ಟ್ 17) ಬೆಳಗ್ಗೆ ಕರೆ ಮಾಡಿದ್ದರು. ಬಳಿಕ ಲೊಕೇಷನ್ ಟ್ರೇಸ್ ಮಾಡಿ ಪೊಲೀಸ್ ಆಯುಕ್ತರು ಸಿಬ್ಬಂದಿಯನ್ನು ಕಳುಹಿಸಿದ್ದರು.
ಲಾಕ್ ಆಗಿದ್ದ ಫ್ಲ್ಯಾಟ್ ಬಾಗಿಲು ಒಡೆದು ಸಿಬ್ಬಂದಿ ಒಳಗೆ ಹೋದರು, ಅಷ್ಟರಲ್ಲೇ ರಮೇಶ್ ಆತ್ಮಹತ್ಯೆಗೆ ಶರಣಾಗಿದ್ದರು. ಒಂದು ವಾರದಿಂದ ರಮೇಶ್ ದಂಪತಿ ಕೋವಿಡ್ ಸೋಂಕಿನಿಂದ ಬಳಲುತ್ತಿದ್ದರು. ಆರೋಗ್ಯ ತೀವ್ರ ಹದಗೆಟ್ಟ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ತೀರ್ಮಾನಿಸಿದ್ದಾರೆ.
ಪೊಲೀಸ್ ಆಯುಕ್ತ ಮತ್ತು ಹಿಂದೂ ಸಂಘಟನೆ ಮುಖಂಡರಿಗೆ ತಮ್ಮ ಅಂತ್ಯಕ್ರಿಯೆಗೆ 1 ಲಕ್ಷ ರೂ. ಹಣ ಇಟ್ಟಿರುವುದಾಗಿ ವಾಯ್ಸ್ ಮೆಸೇಜ್ ಮಾಡಿದ್ದಾರೆ. ಅಲ್ಲದೇ ಮನೆಯಲ್ಲಿರುವ ವಸ್ತು ಮಾರಿ ಬರುವ ಹಣವನ್ನು ಬಡವರಿಗೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಸದ್ಯ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದೆ.
ಸ್ಥಳ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ಡಿಸಿಪಿ ಹರಿರಾಂ ಶಂಕರ್, "ಮಂಗಳವಾರ ಬೆಳಗ್ಗೆ 6.40ರ ಹೊತ್ತಿಗೆ ಕಮಿಷನರ್ಗೆ ವಾಟ್ಸಾಪ್ ಮೆಸೇಜ್ ಮತ್ತು ಕಾಲ್ ಬಂದಿದೆ. ಕೊರೊನಾ ಭಯದಿಂದ ನಾನು ಮತ್ತು ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಅಂತ ಕಾಲ್ ಬಂದಿತ್ತು. ತಕ್ಷಣ ಕಮಿಷನರ್ ಕಾಲ್ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ. ವಾಯ್ಸ್ ಮೆಸೇಜ್ ಮಾಡಿ ಧೈರ್ಯ ತುಂಬಿದರೂ ರಿಪ್ಲೈ ಮಾಡಿಲ್ಲ. ನಂತರ ಲೊಕೇಶನ್ ಟ್ರೇಸ್ ಮಾಡಿ ನಮ್ಮ ತಂಡ ಬಾಗಿಲು ಒಡೆದು ನೋಡಿದಾಗ, ಆಗಲೇ ಆತ್ಮಹತ್ಯೆ ಮಾಡಿಕೊಂಡಿದ್ದರು," ಎಂದು ತಿಳಿಸಿದ್ದಾರೆ.
"ಡೆತ್ ನೋಟಲ್ಲಿ ನಮಗೆ ಕೊರೊನಾ ಇದೆ. ಬ್ಲಾಕ್ ಫಂಗಸ್ ಬಂದರೆ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೊನಾ ಇರುವ ಬಗ್ಗೆ ಮಾಹಿತಿಯಿಲ್ಲ. ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ಸಲ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದು, ಇದರ ಖಿನ್ನತೆ ಇರಬಹುದು. ಆದರೆ ಇವರು ಯಾರ ಜೊತೆಗೂ ಹೆಚ್ಚಾಗಿ ಬೆರೆತಿರುವ ಬಗ್ಗೆ ಮಾಹಿತಿಯಿಲ್ಲ," ಎಂದು ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
ಮೃತದೇಹದ ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ರಿಪೋರ್ಟ್
ಮಂಗಳೂರಿನಲ್ಲಿ ಕೊರೊನಾ ಸೋಂಕಿಗೆ ಹೆದರಿ ದಂಪತಿ ಆತ್ಮಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದ್ದು, ಮೃತದೇಹಗಳ ಕೋವಿಡ್ ಟೆಸ್ಟ್‌ನಲ್ಲಿ ನೆಗೆಟಿವ್ ವರದಿ ದಾಖಲಾಗಿದೆ.
ದಂಪತಿ ಮೃತದೇಹಗಳ ಪೋಸ್ಟ್ ಮಾರ್ಟಮ್‌ಗೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್‌ನಲ್ಲಿ ಕೋವಿಡ್ ಪಾಸಿಟಿವ್ ಕಾಣಿಸಿಕೊಂಡಿಲ್ಲ. ವರದಿ ನೆಗೆಟಿವ್ ಬೆನ್ನಲ್ಲೇ ಮೃತದೇಹಗಳ ಪೋಸ್ಟ್ ಮಾರ್ಟಮ್‌ಗೆ ಸಿದ್ಧತೆ ಮಾಡಲಾಗಿದೆ.
ಕೋವಿಡ್ ಬಂದಿರಬಹುದು ಅನ್ನುವ ಆತಂಕದಲ್ಲಿ ದಂಪತಿ ಮಂಗಳೂರು ಹೊರವಲಯದ ಕುಳಾಯಿಯ ರೆಹೆಜಾ ಅಪಾರ್ಟ್‌ಮೆಂಟ್‌ನಲ್ಲಿ ಮಂಗಳವಾರ ಬೆಳಿಗ್ಗೆ ನೇಣಿಗೆ ಶರಣಾಗಿದ್ದರು. ಡೆತ್‌ನೋಟ್ ಬರೆದಿಟ್ಟು ರಮೇಶ್ ಮತ್ತು ಗುಣ ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ ರಮೇಶ್ ಪತ್ನಿ ಗುಣ ಮಧುಮೇಹ ಖಾಯಿಲೆಯಿಂದ ಬಳಲುತ್ತಿದ್ದರು ಎಂದು ಗೊತ್ತಾಗಿದೆ.