ಕಾಸರಗೋಡು: ಅರಣ್ಯ ಪ್ರದೇಶಗಳೊಂದಿಗೆ ಸೇರಿಕೊಂಡಿರುವ ಜನವಾಸ ವಲಯಗಳಲ್ಲಿ ಕಾಡುಪ್ರಾಣಿಗಳ ಉಪಟಳಕ್ಕೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸಿದ್ಧಗೊಳಿಸಲಾಗುವ ಸಮಗ್ರ ಯೋಜನೆಯಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳೂ ಭಾಗಿಗಳಾಗಬೇಕು ಎಂದು ಅರಣ್ಯ ಸಚಿವ ಎ.ಕೆ.ಶಶೀಂದ್ರನ್ ಅಭಿಪ್ರಾಯಪಟ್ಟಿದ್ದಾರೆ.
ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ತ್ರಿಸ್ತರ ಪಂಚಾಯತ್ ಮಟ್ಟದಲ್ಲಿ ಯೋಜನೆಗಳಿಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ವಾರ್ಷಿಕ ಯೋಜನೆಯಲ್ಲಿ ಅಳವಡಿಸಿ ತ್ರಿಸ್ತರ ಪಂಚಾಯತ್ ಗಳು ಒಂದು ಪಾಲು ಮೊಬಲಗು ಈ ಯೋಜನೆಗಳಿಗಾಗಿ ಮೀಸಲಿಡಬಹುದು. ಶಾಸಕರ ನಿಧಿಯನ್ನೂ ಬಳಸಬಹುದು ಎಂದವರು ತಿಳಿಸಿದರು.ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಅವರ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯತ್ ಅಧ್ಯಕ್ಷರ ಸಭೆಯನ್ನು ಆನ್ ಲೈನ್ ಮೂಲಕ ನಡೆಸಿ ತುರ್ತು ಪರಿಹಾರಕ್ಕೆ ಯೋಜನೆ ರಚಿಸಲು ಸಭೆ ನಿರ್ಧರಿಸಿದೆ. ಸದ್ರಿ ಈ ಪ್ರದೇಶಗಳಲ್ಲಿ ಸ್ಥಫಿಸಲಾದ ಸೋಲಾರ್ ತಂತಿ ಬೇಲಿಗಳು ಇತ್ಯಾದಿಗಳು ಪ್ರಯೋಜನದಾಯಕವಾಗುತ್ತಿಲ್ಲ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮತ್ತು ಕಾಸರಗೋಡು ಜಿಲ್ಲಾಧಿಕಾರಿಗಳ ಜಂಟಿ ಸಭೆಯನ್ನು 2 ವಾರಗಳೊಳಗೆ ನಡೆಸಲೂ ಸಭೆ ನಿರ್ಧರಿಸಿದೆ. ಉಳಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚಿಸಲಾಯಿತು.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಇ.ಚಂದ್ರಶೇಖರನ್, ನ್ಯಾಯವಾದಿ ಸಿ.ಎಚ್.ಕುಂಞಂಬು, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್ ವೀರ್ ಚಂದ್ ಮೊದಲಾದವರು ಉಪಸ್ಥಿತರಿದ್ದರು.