ನವದೆಹಲಿ: ಏರ್ ಏಷ್ಯಾ ಮತ್ತು ಇಂಡಿಯೊ ವಿಮಾನಗಳು ಜನವರಿ 29ರಂದು ಮುಂಬೈ ವಾಯುಪ್ರದೇಶದಲ್ಲಿ ಒಂದೇ ದಾರಿಯಲ್ಲಿ ಬಂದುದು ಹಾಗೂ ಕೇವಲ 8 ಕಿ.ಮೀ.ಅಂತರದಲ್ಲಷ್ಟೇ ಹಾರಾಟ ನಡೆಸಿದ ಆತಂಕಕಾರಿ ವಿಚಾರವನ್ನು ವಿಮಾನ ದುರಂತ ತನಿಖಾ ದಳದ (ಎಎಐಬಿ) ವರದಿಯೊಂದು ಬಹಿರಂಗಪಡಿಸಿದೆ.
ಮುಂಬೈ ವಿಮಾನ ಸಂಚಾರ ನಿಯಂತ್ರಣ ಕೇಂದ್ರವು 'ಪರಿಸ್ಥಿತಿಗೆ ತಕ್ಕಂತೆ ಸ್ಪಂದಿಸಲು' ವಿಫಲವಾದುದೇ ಈ 'ಗಂಭೀರ ಘಟನೆ' ನಡೆಯಲು ಕಾರಣ ಎಂದು ವರದಿಯಲ್ಲಿ ತಿಳಿಸಲಾಗಿದೆ. ವರದಿಯನ್ನು ಈಚೆಗೆ ಬಿಡುಗಡೆ ಮಾಡಲಾಗಿದೆ.
'ಮುಂಬೈ ವಿಮಾನ ಸಂಚಾರ ನಿಯಂತ್ರಕರು ಈ ಮೊದಲಿನ ವಿಮಾನಯಾನವನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ವಿಮಾನದಿಂದ ಬಂದ ಸ್ವಯಂ ಎಚ್ಚರಿಕೆಯನ್ನು ಕಡೆಗಣಿಸಿರಬಹುದು' ಎಂದು ಸಹ ವರದಿ ಅಭಿಪ್ರಾಯಪಟ್ಟಿದೆ.
ನಡೆದಿದ್ದೇನು?
ಜನವರಿ 29ರಂದು ಏರ್ ಏಷ್ಯಾ ವಿಮಾನವು ಅಹಮದಾಬಾದ್‌ನಿಂದ ಚೆನ್ನೈಯತ್ತ ತೆರಳುತ್ತಿದ್ದರೆ, ಇಂಡಿಯೊ ವಿಮಾನ ಬೆಂಗಳೂರಿನಿಂದ ವಡೋದರಾದತ್ತ ತೆರಳುತ್ತಿತ್ತು. ಸಾಮಾನ್ಯವಾಗಿ ಅಹಮದಾಬಾದ್‌ನಿಂದ ದಕ್ಷಿಣದ ರಾಜ್ಯಗಳತ್ತ ತೆರಳುವ ವಿಮಾನಗಳು ಬಾವನಗರ ಮೂಲಕ ಚಲಿಸುವುದು ವಾಡಿಕೆ. ಆದರೆ ಆ ದಿನ ಏರ್ ಏಷ್ಯಾ ವಿಮಾನವು ಮುಂಬೈ ವಿಮಾನನಿಲ್ದಾಣದಲ್ಲಿ ಬಂದಿಳಿಯುವ ವಿಮಾನಗಳು ಚಲಿಸುವ ದಾರಿಯಲ್ಲಿ ಚಲಿಸುತ್ತಿತ್ತು.
ಅಂದಿನ ದಿನದ ಮಟ್ಟಿಗೆ ಏರ್ ಏಷ್ಯಾದ ಮಾರ್ಗದಲ್ಲಿ ಬದಲಾವಣೆ ಆಗಿತ್ತು ಮತ್ತು ಇಂಡಿಗೊ ವಿಮಾನ ತನ್ನ ನಿರ್ದಿಷ್ಟ ಪಥದಲ್ಲೇ ಸಂಚರಿಸುತ್ತಿತ್ತು. ಈಗ ಎರಡೂ ವಿಮಾನಗಳೂ ಬಹುತೇಕ ಸಮಾನ ಎತ್ತರದಲ್ಲಿ ಮುಖಾಮುಖಿಯಾಗುವ ರೀತಿಯಲ್ಲಿ ಸಂಚರಿಸುತ್ತಿದ್ದವು.
ಈ ಹಂತದಲ್ಲಿ ಮುಂಬೈ ವಿಮಾನ ಸಂಚಾರ ನಿಯಂತ್ರಣ ಕೇಂದ್ರದ ಸ್ವಯಂ ನಿಯಂತ್ರಣ ವ್ಯವಸ್ಥೆ ಎಚ್ಚರಿಕೆ ಕೊಟ್ಟಿತ್ತು. ಆದರೆ ಇದನ್ನು ನಿಯಂತ್ರಕರು ಕಡೆಗಣಿಸಿದ್ದರು. ಏರ್ ಏಷ್ಯಾ ವಿಮಾನವು ಬಾವನಗರ ಮಾರ್ಗದಲ್ಲಿ ಸಂಚರಿಸುತ್ತಿದೆ ಎಂದು ನಿಯಂತ್ರಕರು ಅಂದಾಜಿಸಿದ್ದರಿಂದಲೇ ಈ ಎಚ್ಚರಿಕೆಯನ್ನು ಕಡೆಗಣಿಸಿದ್ದರು.
ನಿಯಂತ್ರಕರಿಗೆ ಅಪಾಯದ ಬಗ್ಗೆ ಗೊತ್ತಾದಾಗ ಏರ್ ಏಷ್ಯಾ ವಿಮಾನ 38,008 ಅಡಿ ಎತ್ತರದಲ್ಲಿ ಹಾಗೂ ಇಂಡಿಗೊ ವಿಮಾನ 38,000 ಅಡಿ ಎತ್ತರದಲ್ಲಿ ಸಂಚರಿಸುತ್ತಿದ್ದವು. ಏರ್ ಏಷ್ಯಾದ ಸಂಚಾರ ವೇಳೆ ಡಿಕ್ಕಿ ತಪ್ಪಿಸುವ ವ್ಯವಸ್ಥೆ (ಟಿಸಿಎಎಸ್) ತನ್ನ ಪೈಲಟ್‌ಗೆ ಎಚ್ಚರಿಕೆ ಕೊಟ್ಟಿದ್ದರಿಂದ ವಿಮಾನ ಸಾಗುವ ಪಥದ ಎತ್ತರವನ್ನು ಹೆಚ್ಚಿಸಲಾಯಿತು. ಇಂಡಿಗೊ ವಿಮಾನ ಅದೇ ಎತ್ತರದಲ್ಲಿ ಹಾರಾಟ ನಡೆಸುತ್ತ ಮುಂದೆ ಬರುತ್ತಿದ್ದರೆ, ಏರ್ ಏಷ್ಯಾ ವಿಮಾನ 38,396 ಅಡಿ ಎತ್ತರದಲ್ಲಿ ಸಂಚರಿಸುವಂತೆ ನೋಡಿಕೊಳ್ಳಲಾಯಿತು.
ಈ ಹಂತದಲ್ಲಿ ಎರಡೂ ವಿಮಾನಗಳ ನಡುವಿನ ಪಾರ್ಶ್ವಗಳ ಅಂತರ 8 ಕಿ.ಮೀ. ಇದ್ದರೆ, ವಿಮಾನಗಳ ಎತ್ತರ 300 ಅಡಿಗಳಷ್ಟು ಇತ್ತು. ಏರ್ ಏಷ್ಯಾವು 500 ಅಡಿಗಳಷ್ಟು ಮೇಲ್ಭಾಗದಲ್ಲಿ ಹಾರಾಟ ನಡೆಸುತ್ತಿದ್ದಾಗ ಎರಡೂ ವಿಮಾನಗಳ ಪಾರ್ಶ್ವ ಅಂತರ ಇದ್ದುದು 6.5 ಕಿ.ಮೀ.ನಷ್ಟು ಮಾತ್ರ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕೋವಿಡ್ ನಂತದ ದಿನಗಳಲ್ಲಿ ವಿಮಾನಗಳ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಹೀಗಾಗಿ ಪರಿಸ್ಥಿತಿಗೆ ತಕ್ಕಂತೆ ಹೊಂದಿಕೊಳ್ಳುವ ತರಬೇತಿಯನ್ನು ವಾಯುಸಂಚಾರ ನಿಯಂತ್ರಕರಿಗೆ ನೀಡಬೇಕು, ಇದೀಗ ಕೋವಿಡ್ ಪರಿಸ್ಥಿತಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಕೋವಿಡ್ ಮೊದಲಿನ ಸ್ಥಿತಿಯಲ್ಲಿನ ವಿಮಾನಯಾನ ವೇಳಾಪಟ್ಟಿಗೆ ಅನುಗುಣವಾಗಿ ಕೆಲಸ ಮಾಡುವಂತಹ ವ್ಯವಸ್ಥೆ ರೂಪಿಸಬೇಕು ಎಂದು ವರದಿಯಲ್ಲಿ ತಿಳಿಸಲಾಗಿದೆ.