ನವದೆಹಲಿ: ದೇಶಾದ್ಯಂತ ಹೆಚ್ಚಳ ಕಾಣುತ್ತಿರುವ ಕೊರೊನಾ ಪ್ರಕರಣಗಳ ಸಂಖ್ಯೆಗೆ ಡೆಲ್ಟಾ ವೈರಾಣು ಕಾರಣ ಎಂದು ಭಾರತೀಯ ಜೀನೋಮ್ ಸೀಕ್ವೆನ್ಸಿಂಗ್ ಸಂಸ್ಥೆ ತಿಳಿಸಿದೆ. ಡೆಲ್ಟಾ ವೈರಾಣುವಿನಿಂದಾಗಿ ಲಸಿಕೆಯ ಪ್ರಭಾವವೂ ತಗ್ಗಿರುವುದಾಗಿ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಹಾಗಿದ್ದೂ ಲಸಿಕೆ ಹಾಕಿಸಿಕೊಳ್ಲಬೇಕಾಗಿರುವುದು ಕಡ್ಡಾಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದರೂ, ಸಾವಿನ ಪ್ರಮಾಣವನ್ನು ಕಡಿಮೆಗೊಳಿಸುವಲ್ಲಿ ಲಸಿಕೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಏಕದಿನ ಸೋಂಕು ಪ್ರಕರಣಗಳ ಸಂಖ್ಯೆ ಮೇ ತಿಂಗಳಿಗೆ ಹೋಲಿಸಿದರೆ ಹೆಚ್ಚಳವಾಗಿರುವುದು ಕಂಡುಬಂದಿರುವ ಹಿನ್ನೆಲೆಯಲ್ಲಿ ಸಂಸ್ಥೆ ಈ ಮಾಹಿತಿ ನೀಡಿದೆ. ಏಕ ದಿನ ಸೋಂಕುಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ಸಮಾಧಾನಕರ ಸಂಗತಿ ಎಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ ಕಂಡುಬಂದಿರುವುದು. ಕಳೆದ 150 ದಿನಗಳಲ್ಲಿ ಇದೇ ಮೊದಲ ಬಾರಿಗೆ ಸೋಂಕು ಅತಿ ಕಡಿಮೆ ಸಂಖ್ಯೆ ಅಂದರೆ 3.63 ಲಕ್ಷ ಪ್ರಕರಣಗಳನ್ನು ದಾಖಲಿಸಿದೆ.
ಇದೇ ವೇಳೆ ದೇಶಾದ್ಯಂತ ಇದುವರೆಗೂ ಒಟ್ಟು 57 ಕೋಟಿ ಮಂದಿಗೆ ಲಸಿಕೆ ನೀಡಲಾಗಿದೆ. ಏಕ ದಿನ ಪ್ರಕರಣಗಳ ಸಂಖ್ಯೆ ಸರಾಸರಿ 25,000 ದಾಖಲಾಗುತ್ತಿವೆ.