ತಿರುವನಂತಪುರಂ:ಸಿಪಿಎಂನ ಹಿರಿಯ ಮಹಿಳಾ ನಾಯಕಿ ಪಿ. ಸತಿದೇವಿ ಅವರು ರಾಜ್ಯ ಮಹಿಳಾ ಆಯೋಗದ ಹೊಸ ಅಧ್ಯಕ್ಷೆಯಾಗಲಿದ್ದಾರೆ. ಮಂಗಳವಾರ ನಡೆದ ಸಿಪಿಎಂ ಸೆಕ್ರೆಟರಿಯೇಟ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸತಿದೇವಿ ಜನಾಧಿಪತ್ಯ ಮಹಿಳಾ ಅಸೋಸಿಯೇಶನ್ ರಾಜ್ಯಾಧ್ಯಕ್ಷರೂ ಆಗಿದ್ದಾರೆ.
ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಎಂಸಿ ಜೋಸೆಫೈನ್ ರಾಜೀನಾಮೆ ನೀಡಿದ ಎರಡು ತಿಂಗಳ ನಂತರ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತಿದೆ. ದೂರು ನೀಡಲು ಕರೆ ಮಾಡಿದ ಯುವತಿಯೊಂದಿಗೆ ಕೆಟ್ಟದಾಗಿ ಮಾತನಾಡಿ ವಿವಾದಕ್ಕೆಡೆಯಾಗಿ ಜೋಸೆಫೈನ್ ಜೂನ್ ನಲ್ಲಿ ರಾಜೀನಾಮೆ ನೀಡಿದ್ದರು. ಏತನ್ಮಧ್ಯೆ, ಹೊಸ ಅಧ್ಯಕ್ಷರ ಬಗ್ಗೆ ಊಹಾಪೋಹಗಳನ್ನು ಹಲವು ಬಾರಿ ಎತ್ತಲಾಗಿದೆ.
ಈ ಹಿಂದೆ, ಪಕ್ಷದ ಹೊರಗಿನ ಸಾರ್ವಜನಿಕ ವ್ಯಕ್ತಿಯನ್ನು ಈ ಹುದ್ದೆಗೆ ನೇಮಕ ಮಾಡಲಾಗುವುದು ಎಂದು ವರದಿಗಳು ಬಂದಿದ್ದವು. ಆದರೆ ಸಿಪಿಎಂನಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.