ಮುಂಬೈ: ವಿವಾಹಿತ ಮಹಿಳೆಯತ್ತ ಪ್ರೇಮ ನಿವೇದನೆಯ ಚೀಟಿಯನ್ನು ಎಸೆಯುವುದು ಆಕೆಯ ಒಳ್ಳೆತನ ದುರುಪಯೋಗ ಪಡಿಸಿಕೊಂಡಂತೆ ಎಂದು ಬಾಂಬೆ ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ. ಅಲ್ಲದೆ ಚೀಟಿ ಎಸೆಯುವ ಕೃತ್ಯ ವಿವಾಹಿತ ಮಹಿಳೆಯ ಘನತೆಯನ್ನು ಅವಮಾನಿಸಿದಂತೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
2011ರಲ್ಲಿ ಶ್ರೀಕೃಷ್ಣ ತವರಿ ಎಂಬಾತ 'ಎಸ್' ಎಂಬ ಮಹಿಳೆ ಪಾತ್ರೆ ತೊಳೆಯುವ ಸಂದರ್ಭ ಆಕೆಗೆ ಚೀಟಿ ನೀಡಲು ಪ್ರಯತ್ನಿಸಿದ್ದ. ಆತನ ಚೀಟಿ ಸ್ವೀಕರಿಸಲು ಮಹಿಳೆ ನಿರಾಕರಿಸಿದಾಗ, ಆತ ಚೀಟಿಯನ್ನು ಅಲ್ಲೆ ಎಸೆದು 'ಐ ಲವ್ ಯೂ' ಎಂದು ಹೇಳಿ ಓಡಿಹೋಗಿದ್ದ. ಮರುದಿನ ಆತ ಮಹಿಳೆಯನ್ನು ಕಂಡಾಕ್ಷಣ ಅಸಭ್ಯವಾಗಿ ವರ್ತಿಸಿದ್ದ ಎನ್ನಲಾಗಿದೆ. ಈ ಬಗ್ಗೆ ಆ ಮಹಿಳೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು 2018ರಲ್ಲಿ ಶ್ರೀ ಕೃಷ್ಣ ಎಂಬಾತನಿಗೆ ೨ ವರ್ಷಗಳ ಜೈಲುವಾಸ ಶಿಕ್ಷೆ ವಿಧಿಸಿದ್ದಲ್ಲದೆ, 45,000 ದಂಡ ತೆರುವಂತೆ ಆದೇಶಿಸಿದ್ದರು. ನ್ಯಾಯಾಲಯದ ತೀರ್ಪಿನ ವಿರುದ್ಧ ಆತ ಮೇಲ್ಮನವಿ ಸಲ್ಲಿಸಿದ್ದ.ಆರೋಪಿ ಶ್ರೀ ಕೃಷ್ಣ ದೂರು ನೀಡಿದ ಮಹಿಳೆಯ ಮನೆಯ ಬಳಿ ಕಿರಾಣಿ ಅಂಗಡಿಯೊಂದನ್ನು ನಡೆಸುತ್ತಿದ್ದ. ಮಹಿಳೆ ತನ್ನ ಅಂಗಡಿಯಲ್ಲಿ ಬಾಕಿ ಉಳಿಸಿಕೊಂಡಿದ್ದಾಳೆ, ಅದನ್ನು ತೀರಿಸಲು ಆಗದೆ ತನ್ನ ಮೇಲೆ ಸುಳ್ಳು ದೂರು ದಾಖಲಿಸಿದ್ದಾಗಿ ಈ ಹಿಂದೆ ಆರೋಪಿ ಪ್ರತ್ಯಾರೋಪ ಮಾಡಿದ್ದ. ಆದರೆ ನ್ಯಾಯಾಲಯ ವಿಚಾರಣೆ ಸಂದರ್ಭ ಆತನ ಮೇಲಿನ ಆರೋಪ ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ಆತನಿಗೆ 90,000 ದಂಡ ಶುಲ್ಕ ತೆರುವಂತೆ ಸೂಚಿಸಿದೆ.