ನವದೆಹಲಿ: ಭಾರತದಲ್ಲಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಅಭಿಪ್ರಾಯವಿದ್ದು, ವ್ಯವಸ್ಥೆಯ ಪ್ರತಿಷ್ಟೆ ಹೆಚ್ಚಿಸುವಂತಹ ಸುಧಾರಣೆಗೆ ಕೆಲಸ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೋವಿಡ್ 19-ಸಾಂಕ್ರಾಮಿಕದ ಆರಂಭದಲ್ಲಿ ಪೊಲೀಸರ ಬಗೆಗಿನ ವ್ಯತಿರಿಕ್ತ ಜನಭಿಪ್ರಾಯ ತಾತ್ಕಾಲಿಕವಾಗಿ ಬದಲಾಗಿತ್ತು. ಆದರೆ, ಮತ್ತೆ ಹಳೆಯ ಪರಿಸ್ಥಿತಿಗಳು ಪುನರಾವರ್ತನೆಗೊಂಡಿವೆ ಎಂದರು. ಸರ್ದಾರ್ ವಲ್ಲಭಭಾಯಿ ಪಟೇಲ್ ರಾಷ್ಟ್ರೀಯ ಪೊಲೀಸ್ ಅಕಾಡೆಮಿಯಲ್ಲಿ ಐಪಿಎಸ್ ಪ್ರೊಬೇಷನರ್ಸ್ ಜೊತೆಗಿನ ವರ್ಚುವಲ್ ಸಭೆಯಲ್ಲಿ ಅವರು ಮಾತನಾಡಿದರು.
'ಭಾರತವು ಪ್ರಸ್ತುತ ಇತಿಹಾಸದಲ್ಲಿ ಅತ್ಯಂತ ಮಹತ್ವದ ಹಂತದಲ್ಲಿದೆ. ಇಂತಹ ಸಮಯದಲ್ಲಿ ಪೊಲೀಸರು ತಮ್ಮ ವ್ಯವಸ್ಥೆಯ ಹೆಸರು, ಪ್ರತಿಷ್ಠೆಯನ್ನು ಸುಧಾರಿಸಲು ಶ್ರಮಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (NDRF) ಯನ್ನು ಉದಾಹರಣೆಯಾಗಿ ನೀಡಿದ ಪ್ರಧಾನಿ, ಎನ್‌ಡಿಆರ್‌ಎಫ್ ಸಿಬ್ಬಂದಿ ಸಂಕಷ್ಟ ಪರಿಸ್ಥಿಯಲ್ಲಿ ಕಲ್ಪಿಸುವ ಸೇವೆಗಳ ಬಗ್ಗೆ ಜನರಿಗೆ ಹೆಚ್ಚಿನ ನಂಬಿಕೆ ಇದೆ' ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ಪೊಲೀಸ್ ತರಬೇತಿ ಸುಧಾರಿಸಲು ಭಾರತ ಸಾಕಷ್ಟು ಶ್ರಮಿಸಿದೆ, ಭವಿಷ್ಯದಲ್ಲಿ ಉತ್ತಮ ನಿಯಮಾವಳಿಗಳನ್ನು ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದರು. "ರಾಷ್ಟ್ರ ಮೊದಲು ಯಾವಾಗಲೂ ಮೊದಲು" ಎಂಬ ಮಂತ್ರವನ್ನ ಪ್ರಧಾನಿ ಮತ್ತೊಮ್ಮೆ ಘೋಷಿಸಿದರು. ಐಪಿಎಸ್ ಅಭ್ಯರ್ಥಿಗಳು ಸ್ಥಳೀಯವಾಗಿ ಎದುರಿಸುತ್ತಿರುವ ಸಮಸ್ಯೆಗಳನ್ನು ಲೆಕ್ಕಿಸದೆ ದೇಶದ ಹಿತಾಸಕ್ತಿಗೆ ಮೊದಲ ಸ್ಥಾನ ನೀಡಬೇಕೆಂದು ಕೋರಿದರು. ಜವಾಬ್ದಾರಿಯುತ ಪೊಲೀಸಿಂಗ್ ಚೌಕಟ್ಟು ರೂಪಿಸದ ಕಾರಣ, ದಶಕಗಳಿಂದ ತಪ್ಪಾದ ನೀತಿಗಳು, ಸಾಂಪ್ರದಾಯಿಕ ಬದ್ಧತೆಗಳು ದೈನಂದಿನ ತಮ್ಮ ಕರ್ತವ್ಯದ ವೇಳೆ ಪೊಲೀಸರು ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ಐಪಿಎಸ್ ಪ್ರಶಿಕ್ಷಣಾರ್ಥಿಗಳು ಪೊಲೀಸ್ ಅಕಾಡೆಮಿಯಲ್ಲಿ ತಮ್ಮ ಅನುಭವಗಳನ್ನು ಪ್ರಧಾನಿ ಮೋದಿಯವರೊಂದಿಗೆ ಹಂಚಿಕೊಂಡರು. ಮೋದಿ ಪರೀಕ್ಷಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಅಭ್ಯಾಸಗಳ ಬಗ್ಗೆ ವಿಚಾರಿಸಿದರು . ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಭದ್ರತಾ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಲು ಬಯಸುತ್ತೀರಿ ಎಂದು ಕೇಳಿದರು. ವ್ಯಕ್ತಿತ್ವ ಲಕ್ಷಣಗಳು, ಹಿನ್ನಲೆಯಿಂದ ಬಂದ ಅನುಭವ ಬಳಸಿಕೊಂಡು ಯಾವ ರೀತಿ ಕೆಲಸ ಮಾಡಲು ಬಯಸುತ್ತೀರಾ ಎಂದು ಕೇಳಿ ತಿಳಿದು ಕೊಂಡರು.