ಕಾಸರಗೋಡು: ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಆಶ್ರಯದಲ್ಲಿ ಕನ್ನಡ ಪತ್ರಕರ್ತರ ಸಮ್ಮಿಲನ, ಹಿರಿಯ ಪತ್ರಕರ್ತರಿಗೆ ಗೌರವಾರ್ಪಣೆ ಹಾಗೂ ಓಣಂ ಔತಣಕೂಟ ಸೋಮವಾರ ಕಾಸರಗೋಡಿನ ಉಡುಪಿ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ಕ್ಯಾ. ಗಣೇಶ್ ಕಾರ್ಣಿಕ್ ಸಮಾರಂಭವನ್ನು ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಪ್ರಾಚೀನ ಕಾಲದಿಂದಲೂ ಭಾರತ ವಿಶ್ವಕ್ಕೆ ಮಾದರಿಯಾಗಿದ್ದು, ಇಲ್ಲಿಯ ವೈವಿಧ್ಯಮಯ ಆಚರಣೆ, ಸಂಸ್ಕøತಿಗಳು ಜಗತ್ತಿನ ಇತರೆಡೆ ಎಂದಿಗೂ ಕಾಣಿಸದು. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಹಬಾಳ್ವೆ ತತ್ವ ಜಾಗತಿಕ ಬಾಂಧವ್ಯವನ್ನು ಮತ್ತಷ್ಟು ದೃಢಪಡಿಸಿದೆ. ಸಾಮಾಜಿಕ ಏಳು ಬೀಳುಗಳ ನೇರ ನೋಟಕರಾದ ಮಾಧ್ಯಮಗಳು ಜನರೆಡೆ ಏಕತೆ, ಸಹಬಾಳ್ವೆಗೆ ಸದಾ ಕಟಿಬದ್ದರಾಗಿ ಕಾರ್ಯನಿರ್ವಹಿಸಿದಾಗ ಸುಂದರ ಭವಿಷ್ಯ ನಿರ್ಮಾಣ ಸಾಧ್ಯ ಎಮದು ತಿಳಿಸಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎ.ಆರ್. ಸುಬ್ಬಯ್ಯಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು, ಕಸಾಪ ದ.ಕ ಜಿಲ್ಲಾ ಘಟಕ ಅಧ್ಯಕ್ಷ ಎಸ್. ಪ್ರದೀಪ್‍ಕುಮಾರ್ ಕಲ್ಕೂರ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ ಮಾಜಿ ಅಧ್ಯಕ್ಷ, ಚಿತ್ರನಟ ಕಾಸರಗೋಡು ಚಿನ್ನಾ, ಉದ್ಯಮಿ ರಾಮ್‍ಪ್ರಸಾದ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಸಂದರ್ಭ ಹಿರಿಯ ಪತ್ರಕರ್ತರಾದ ಪ್ರದೀಪ್ ಬೇಕಲ್ ಹಾಗೂ ಅಚ್ಯುತ ಚೇವಾರ್ ಅವರನ್ನು ಗೌರವಿಸಲಾಯಿತು. ವೀಜಿ ಕಸರಗೋಡು ಸನ್ಮಾನಿತರ ಪರಿಚಯ ನೀಡಿದರು. ಜಿಲ್ಲಾ ಕನ್ನಡ ಪತ್ರಕರ್ತರ ಸಂಘದ ಕಾರ್ಯದರ್ಶಿ ಗಂಗಾಧರ ಯಾದವ್ ಸ್ವಾಗತಿಸಿ, ಕೋಶಾಧಿಕಾರಿ ಪುರುಷೋತ್ತಮ ಪೆರ್ಲ ವಂದಿಸಿದರು. ರವಿ ನಾಯ್ಕಾಪು ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಅಂಗವಾಗಿ ಓಣಂ ಔತಣಕೂಟ ಆಯೋಜಿಸಲಾಗಿತ್ತು.