ಬದಿಯಡ್ಕ: ಕೇರಳ ಸರ್ಕಾರದ ಸುಭಿಕ್ಷ ಕೇರಳ ಯೋಜನೆ ಮತ್ತು ಬದಿಯಡ್ಕ ಗ್ರಾಮ ಪಂಚಾಯತಿ ಜಂಟಿ ಆಶ್ರಯದಲ್ಲಿ ಸ್ವ-ಉದ್ಯೋಗ ಮೀನು ಕೃಷಿಯ ಭಾಗವಾಗಿ 2019-20 ನೇ ಸಾಲಿನ ಯೋಜನೆಯಲ್ಲಿ ಅಪ್ಪಣ್ಣ ಪೆರಡಾಲ ಅವರು ತಮ್ಮ ಖಾಸಗೀ ಭೂಮಿಯಲ್ಲಿ ದೊಡ್ಡ ಪ್ರಮಾಣದ ಮೀನು ಕೃಷಿ ನಡೆಸಿ ಮಾದರಿಯಾಗಿದ್ದಾರೆ.
ಅಪ್ಪಣ್ಣ ನಾಯ್ಕ ಅವರು ಆಸಾಮ್ ಬಾಲ ಎಂಬ ತಳಿಯ ಮೀನಿನ ಕೃಷಿಯನ್ನು ಕಳೆದೊಂದು ವರ್ಷದಿಂದ ಯಶಸ್ವಿಯಾಗಿ ಮುನ್ನಡೆಸಿದ್ದು, ಇದೀಗ ಮಾರಾಟಕ್ಕೆ ಸಿದ್ದವಾಗಿದೆ. ಇದರ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಬದಿಯಡ್ಕ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಾಂತಾ ಬಾರಡ್ಕ ಅವರು ಉದ್ಘಾಟಿಸಿ ಮಾತನಾಡಿ, ಸ್ವ-ಉದ್ಯೋಗ ಪ್ರೇರೇಪಿಸಲು ಗ್ರಾ.ಪಂ. ಸತತವಾಗಿ ನಿಧಿ ಮಂಜೂರಾತಿ ಮಾಡುತ್ತಿದೆ. ಆದರೆ ನೀಡಲಾದ ಯೋಜನಾ ಮೊತ್ತವನ್ನು ಸಮರ್ಥವಾಗಿ ಬಳಸಿ ಸ್ವಾವಲಂಬಿಗಳಾಗಬೇಕಾದುದು ಕೃಷಿಕರ ಕರ್ತವ್ಯ ಎಂದು ಅವರು ಕರೆನೀಡಿದರು.
ಗ್ರಾ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷೆ ರಶೀದಾ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸದಸ್ಯ ಶಾಮಪ್ರಸಾದ್ ಮಾನ್ಯ, ಸಾಮಾಜಿಕ ಕಾರ್ಯಕರ್ತ ಹಮೀದ್ ಕೆಡೆಂಜಿ, ಅಧ್ಯಾಪಕ ನಿರಂಜನ ರೈ ಪೆರಡಾಲ ಶುಭಹಾರೈಸಿದರು. ಗೋಪಾಲಕೃಷ್ಣ ಸ್ವಾಗತಿಸಿ, ಸತೀಶ್ ವಂದಿಸಿದರು. ವಿಷ ರಹಿತ ತಾಜಾ ಮೀನು ಪಡೆಯಲಿಚ್ಚಿಸುವವರು 7306924356 ಸಂಖ್ಯೆಗೆ ಸಂಪರ್ಕಿಸಬಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.