ಬೆಂಗಳೂರು: ದೂರ ಸಂವೇದಿ ಉಪಗ್ರಹ ಅಂಕಿಅಂಶ ಹಂಚಿಕೆಯಲ್ಲಿ ಸಹಕಾರಕ್ಕೆ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ(ಬ್ರಿಕ್ಸ್) ಒಪ್ಪಂದಕ್ಕೆ ಸಹಿ ಹಾಕಿವೆ ಎಂದು ಇಸ್ರೊ ಹೇಳಿದೆ.
ನಿನ್ನೆ ಹಾಕಲಾಗಿರುವ ಒಪ್ಪಂದದಿಂದಾಗಿ, ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ನಿರ್ದಿಷ್ಟ ದೂರಸ್ಥ ಸಂವೇದಕ ಉಪಗ್ರಹಗಳ ವಾಸ್ತವ ನಕ್ಷತ್ರಪುಂಜವನ್ನು ನಿರ್ಮಿಸುವುದು ಮತ್ತು ಅವುಗಳ ಸಂಬಂಧಿತ ಭೂ ಕೇಂದ್ರಗಳು ಅಂಕಿಅಂಶಗಳನ್ನು ಸಂಗ್ರಹಿಸಲು ಸಹಾಯವಾಗುತ್ತದೆ ಎಂದು ಇಸ್ರೊ ಹೇಳಿದೆ.
ಇದು ಜಾಗತಿಕ ಹವಾಮಾನ ಬದಲಾವಣೆ, ದೊಡ್ಡ ವಿಪತ್ತುಗಳು ಮತ್ತು ಪರಿಸರ ಸಂರಕ್ಷಣೆಯಂತಹ ಮನುಕುಲ ಎದುರಿಸುತ್ತಿರುವ ಸವಾಲುಗಳನ್ನು ಎದುರಿಸುವಲ್ಲಿ ಬ್ರಿಕ್ಸ್ ಬಾಹ್ಯಾಕಾಶ ಸಂಸ್ಥೆಗಳ ನಡುವೆ ಬಹುಪಕ್ಷೀಯ ಸಹಕಾರವನ್ನು ಬಲಪಡಿಸಲು ಸಹಾಯವಾಗುತ್ತದೆ. ಬ್ರಿಕ್ಸ್ ರಾಷ್ಟ್ರಗಳ ಅಧಿಕಾರಿಗಳ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಇಸ್ರೊ ತಿಳಿಸಿದೆ.
ಕಾನ್ಸುಲರ್, ಪಾಸ್‌ಪೋರ್ಟ್, ವೀಸಾ ಮತ್ತು ಸಾಗರೋತ್ತರ ಭಾರತೀಯ ವ್ಯವಹಾರಗಳ ಕಾರ್ಯದರ್ಶಿ, ಭಾರತದ ಬ್ರಿಕ್ಸ್ ಶೆರ್ಪಾ, ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಸಂಜಯ್ ಭಟ್ಟಾಚಾರ್ಯ ಉಪಸ್ಥಿತರಿದ್ದರು. ಈ ಬಗ್ಗೆ ಭಟ್ಟಾಚಾರ್ಯ ಅವರು ಕೂಡ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇಸ್ರೋ ಅಧ್ಯಕ್ಷ ಹಾಗೂ ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿ ಕೆ ಶಿವನ್, ಚೀನಾ ರಾಷ್ಟ್ರೀಯ ಬಾಹ್ಯಾಕಾಶ ಆಡಳಿತದ ಆಡಳಿತಾಧಿಕಾರಿ, ಜಾಂಗ್ ಕೆಜಿಯಾನ್, ದಕ್ಷಿಣ ಆಫ್ರಿಕಾದ ರಾಷ್ಟ್ರೀಯ ಬಾಹ್ಯಾಕಾಶ ಏಜೆನ್ಸಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬ್ರೆಜಿಲಿಯನ್ ಬಾಹ್ಯಾಕಾಶ ಸಂಸ್ಥೆಯ ಅಧ್ಯಕ್ಷ ವಲನಾಥನ್ ಮುನ್ಸಾಮಿ, ಕಾರ್ಲೋಸ್ ಅಗಸ್ಟೊ ಟೀಕ್ಸೀರಾ ಡಿ ಮೌರಾ ಮತ್ತು ನಿರ್ದೇಶಕ ಜನರಲ್ ಆಫ್ ಸ್ಟೇಟ್ ಸ್ಪೇಸ್ ಕಾರ್ಪೊರೇಶನ್ ರೋಸ್ಕೋಸ್ಮೋಸ್, ಡಿಮಿಟ್ರಿ ರೋಗೋಜಿನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.