ಕಾಸರಗೋಡು: ಕೇರಳದಿಂದ ಕರ್ನಾಟಕಕ್ಕೆ ಪ್ರಯಾಣಿಸಲು ಕರ್ನಾಟಕ ರಾಜ್ಯ ಸರ್ಕಾರ ಗಡಿಗಳಲ್ಲಿ ನಿಷೇಧ ಹೇರಿರುವುದಕ್ಕಾಗಿ ಕೇರಳ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೋಟಿಸ್ ಕಳುಹಿಸಿದೆ. ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ವಿಭಾಗೀಯ ಪೀಠವು ಆ.17 ರಂದು ಹಾಜರಾಗುವಂತೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ, ಕೇಂದ್ರ ಸರ್ಕಾರ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳಿಗೆ ನೋಟಿಸ್ ಕಳುಹಿಸಿದೆ.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಕೆ.ಆರ್.ಜಯಾನಂದ ಅವರು ಹೈಕೋರ್ಟ್‍ನಲ್ಲಿ ಸಲ್ಲಿಸಿದ ಅರ್ಜಿಯ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಕರ್ನಾಟಕಕ್ಕೆ ತೆರಳುವವರು 72 ಗಂಟೆಗಳಲ್ಲಿ ನಡೆಸಿದ ಕೋವಿಡ್ ಆರ್‍ಟಿಪಿಸಿಆರ್ ಋಣಾತ್ಮಕ ಪ್ರಮಾಣಪತ್ರವನ್ನು ಕಡ್ಡಾಯಗೊಳಿಸುವ ಸರ್ಕಾರದ ನಿರ್ಧಾರದ ವಿರುದ್ಧ ಅರ್ಜಿ ಸಲ್ಲಿಸಲಾಗಿದೆ. ನಿರ್ಧಾರವನ್ನು ತಕ್ಷಣವೇ ಹಿಂಪಡೆಯಬೇಕು ಮತ್ತು ಕೋವಿಡ್ ವಿರುದ್ಧ ಲಸಿಕೆ ಹಾಕಿಸಿಕೊಂಡವರಿಗೆ ಕರ್ನಾಟಕ ಪ್ರವೇಶಿಸಲು ಅವಕಾಶ ನೀಡಬೇಕು ಎಮದು ವಿನಂತಿಸಲಾಗಿತ್ತು.
ಕರ್ನಾಟಕದ ನಿರ್ಧಾರ ಕೇಂದ್ರ ಸರ್ಕಾರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ. ಆರ್ ಟಿಪಿಸಿಆರ್ ಪ್ರಮಾಣಪತ್ರಕ್ಕೆ 14 ದಿನಗಳ ಅವಧಿಯನ್ನು ನೀಡುವಂತೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಕರ್ನಾಟಕ ಅದನ್ನು 72 ಗಂಟೆಗಳ ಕಾಲ ಹಿಂದಕ್ಕೆ ತಳ್ಳಿತು. ಲಸಿಕೆ ಹಾಕಿದ ವ್ಯಕ್ತಿಗಳನ್ನು ಎಲ್ಲಾ ರಾಜ್ಯಗಳಿಗೆ ತೆರಳಲು ಅವಕಾಶ ನೀಡಬೇಕು ಎಂಬ ಕೇಂದ್ರ ನಿರ್ದೇಶನವನ್ನು ಕರ್ನಾಟಕ ಕೂಡ ಉಲ್ಲಂಘಿಸುತ್ತಿದೆ. ಕಾಸರಗೋಡು ಜಿಲ್ಲೆಯು ಪ್ರಾಚೀನ ಕಾಲಗಳಿಂದಲೂ ದಕ್ಷಿಣ ಕನ್ನಡದ ವಿವಿಧ ಭಾಗಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಇಲ್ಲಿನ ಜನರು ಮಂಗಳೂರಿನ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಾರೆ. ಶಿಕ್ಷಣ, ವ್ಯಾಪಾರ ಮತ್ತು ಕೆಲಸಕ್ಕಾಗಿ ಪ್ರತಿದಿನ ತೆರಳಬೇಕಾಗುತ್ತದೆ. ವೈಯುಕ್ತಿಕ ಕೌಟುಂಬಿಕ ಸಂಬಂಧಗಳೂ ಕರ್ನಾಟಕದೊಂದಿಗೆ ಹಾಸುಹೊಕ್ಕಾಗಿದೆ. ಇಂತಹ ಸಂದರ್ಭದಲ್ಲಿ ಕರ್ನಾಟಕವು ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿದೆ. ನಿರ್ಧಾರವು ಅಸಂವಿಧಾನಿಕವಾಗಿದೆ. ಅರ್ಜಿದಾರರ ವಾದವನ್ನು ಆಲಿಸಿದ ಹೈಕೋರ್ಟ್ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿತ್ತು. ನ್ಯಾಯವಾದಿ ಪಿ.ವಿ ಅನೂಪ್ ಅರ್ಜಿದಾರರ ಪರ ಹಾಜರಾದರು.