ನವದೆಹಲಿ: ಸಂಸತ್ತಿನ ಕಾರ್ಯನಿರ್ವಹಣೆಯನ್ನು ಕಟುವಾಗಿ ಟೀಕಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಅವರು ಪ್ರಸ್ತುತ ಪರಿಸ್ಥಿತಿಯನ್ನು 'ವಿಷಾದದ ಸ್ಥಿತಿ' ಎಂದು ಕರೆದರು. ಸದನದಲ್ಲಿ 'ಸರಿಯಾದ ಚರ್ಚೆ ಇಲ್ಲ' ಎಂದು ಹೇಳಿದರು.
"ಕಾನೂನಿನ ಸ್ಪಷ್ಟತೆ ಇಲ್ಲ. ಕಾನೂನಿನ ಉದ್ದೇಶವೇನೆಂದು ನಮಗೆ ತಿಳಿದಿಲ್ಲ. ಇದು ಸಾರ್ವಜನಿಕರಿಗೆ ನಷ್ಟವಾಗಿದೆ. ಸದನದಲ್ಲಿ ವಕೀಲರು ಹಾಗೂ ಬುದ್ಧಿಜೀವಿಗಳು ಇಲ್ಲ" ಎಂದು ಅವರು ಹೇಳಿದರು.
"ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೋಡಿದರೆ ಅವರಲ್ಲಿ ಹಲವರು ಕಾನೂನು ಬದ್ಧತೆಯಲ್ಲಿದ್ದರು. ಲೋಕಸಭೆ ಹಾಗೂ ರಾಜ್ಯಸಭೆಯ ಮೊದಲ ಸದಸ್ಯರು ವಕೀಲ ಸಮುದಾಯದಿಂದ ತುಂಬಿದ್ದರು" ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ಸಮಾರಂಭದಲ್ಲಿ ನ್ಯಾಯಮೂರ್ತಿ ರಮಣ ಹೇಳಿದರು.
"ದೇಶದ ಇತಿಹಾಸದಲ್ಲಿ 75 ವರ್ಷಗಳು ಒಂದು ಸಣ್ಣ ಅವಧಿಯಲ್ಲ. ನಾವು ಶಾಲೆಗೆ ಹೋಗುವಾಗ ಅವರು ನಮಗೆ ಬೆಲ್ಲದ ತುಂಡು ಹಾಗೂ ಸಣ್ಣ ಧ್ವಜವನ್ನು ನೀಡುತ್ತಿದ್ದರು. ಇಂದು ನಮಗೆ ತುಂಬಾ ಸಿಕ್ಕಿದರೂ ನಾವು ಸಂತೋಷವಾಗಿಲ್ಲ. ನಮ್ಮ ಸಂತೃಪ್ತಿಯ ಮಟ್ಟ ಕೆಳಗೆ ತಲುಪಿದೆ'' ಎಂದು ರಮಣ ಹೇಳಿದರು.