ಅಹ್ಮದಾಬಾದ್: ಮತಾಂತರ ನಿಷೇಧ ಕಾಯ್ದೆಯ ಅಂತರ್ಧರ್ಮೀಯ ವಿವಾಹಗಳಿಗೆ ಅನ್ವಯಿಸುವ ಸೆಕ್ಷನ್ ಗಳಿಗೆ ತಡೆ ನೀಡಿದ್ದ ಗುಜರಾತ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲು ಗುಜರಾತ್ ಸರ್ಕಾರ ಮುಂದಾಗಿದೆ.
"ಹೈಕೋರ್ಟ್ ತಡೆ ನೀಡಿರುವ ಸೆಕ್ಷನ್ ಗಳೇ ಈ ಕಾನೂನಿನ ಮೂಲ ವಿಷಯವಾಗಿದ್ದು, ಈ ಸೆಕ್ಷನ್ ಗಳನ್ನು ರದ್ದುಗೊಳಿಸಿದರೆ ಸರ್ಕಾರ ಜಾರಿಗೆ ತಂದಿರುವ ಕಾನೂನ ಮೂಲ ಆಶಯಕ್ಕೇ ಧಕ್ಕೆ ಉಂಟಾಗಲಿದೆ" ಎಂದು ಗುಜರಾತ್ ನ ಡಿಸಿಎಂ ನಿತಿನ್ ಪಟೇಲ್ ಹೇಳಿದ್ದಾರೆ.
ಕಾಯ್ದೆಯ ಹಲವು ಸೆಕ್ಷನ್ ಗಳ ಪೈಕಿ ಅಂತರ್ಧರ್ಮೀಯ ವಿವಾಹದ ಮೂಲಕ ಮತಾಂತರಗೊಳಿಸುವುದನ್ನು ಅಪರಾಧ ಎಂದು ಪರಿಗಣಿಸಿ ಇಂತಹ ಪ್ರಕರಣಗಳನ್ನು ನಿಯಂತ್ರಿಸುವುದಕ್ಕೆ ಸರ್ಕಾರ ಮುಂದಾಗಿತ್ತು. ಆದರೆ ಹೈಕೋರ್ಟ್ ಪ್ರಮುಖವಾಗಿ ಇದೇ ಸೆಕ್ಷನ್ ಗಳಿಗೆ ತಡೆ ನೀಡಿದೆ.
ವಿವಾಹದ ಮೂಲಕ ಒತ್ತಾಯಪೂರ್ವಕ ಹಾಗೂ ವಂಚನೆಯ ಧಾರ್ಮಿಕ ಮತಾಂತರವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಗುಜರಾತ್ ನ ಧಾಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ, 2021 ಜೂ.15 ರಂದು ಜಾರಿಗೆ ಬಂದಿತ್ತು. ಈ ತಿದ್ದುಪಡಿ ಕಾಯ್ದೆಯಲ್ಲಿನ ಕೆಲವು ಅಂಶಗಳು ಅಸಾಂವಿಧಾನಿಕ ಎಂದು ಗುಜರಾತ್ ನ ಜಮಾಯತ್ ಉಲೇಮಾ-ಎ-ಹಿಂದ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಹಿನ್ನೆಲೆಯಲ್ಲಿ ಸೆಕ್ಷನ್ 5 ರ ಕಾರ್ಯನಿರ್ವಹಣೆಗೆ ತಡೆ ನೀಡಿದ್ದ ಕೋರ್ಟ್ "ಯಾವುದೇ ಒತ್ತಾಯ, ಆಕರ್ಷಣೆ ಅಥವಾ ಮೋಸವೂ ಇಲ್ಲದೇ ಅಂತರ್ಧರ್ಮೀಯ ವಿವಾಹ ನಡೆದರೆ ಅದನ್ನು ಅಕ್ರಮ ಮತಾಂತರಕ್ಕಾಗಿಯೇ ಮಾಡಲಾದ ವಿವಾಹ ಎನ್ನುವುದಕ್ಕೆ ಸಾಧ್ಯವಿಲ್ಲ ಆದ್ದರಿಂದ ಈ ಕಾಯ್ದೆಯ ಕಠಿಣ ಸೆಕ್ಷನ್ ಗಳಾದ 3,4,4a-4c, 5, 6, 6a ಗಳು ಕಾರ್ಯನಿರ್ವಹಿಸುವುದಕ್ಕೆ ತಡೆ ನೀಡಲಾಗುತ್ತಿದೆ" ಎಂದು ತನ್ನ ಇತ್ತೀಚಿನ ಆದೇಶದಲ್ಲಿ ತಿಳಿಸಿತ್ತು.
"ಗುಜರಾತ್ ಸರ್ಕಾರ ಲವ್ ಜಿಹಾದ್ ನ್ನು ತಡೆಗಟ್ಟಲು ವಿವಾಹದ ಮೂಲಕ ಒತ್ತಾಯಪೂರ್ವಕ ಹಾಗೂ ವಂಚನೆಯ ಧಾರ್ಮಿಕ ಮತಾಂತರವನ್ನು ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸುವ ಗುಜರಾತ್ ನ ಧಾಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತಂದಿತ್ತು. ಈ ಕಾನೂನಿನ ಮೂಲ ಉದ್ದೇಶ ಸಮಾಜಘಾತುಕ ಶಕ್ತಿಗಳು ಹೆಣ್ಣುಮಕ್ಕಳನ್ನು ದಾರಿ ತಪ್ಪಿಸಿ, ನಿಜ ಜೀವನ ಶೈಲಿ, ಧರ್ಮ, ಆದಾಯಗಳ ಬಗ್ಗೆ ತಪ್ಪು ಮಾಹಿತಿ ನೀಡಿ ವಿವಾಹವಾಗುತ್ತಿದ್ದರು. ನಂತರ ಯುವತಿಯರಿಗೆ ತಾವು ಪ್ರೀತಿಸಿ ವಿವಾಹವಾಗಿದ್ದ ವ್ಯಕ್ತಿ ಅನ್ಯ ಧರ್ಮೀಯ, ಯಾವುದೇ ಆದಾಯವಿಲ್ಲ ಎಂಬ ನೈಜತೆ ಅರಿವಾಗುತ್ತಿತ್ತು. ಇದನ್ನು ತಡೆಯುವುದಕ್ಕಾಗಿಯೇ ಗುಜರಾತ್ ನ ಧಾಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆಯನ್ನು ಜಾರಿಗೆ ತರಲಾಗಿತ್ತು" ಎಂದು ನಿತಿನ್ ಪಟೇಲ್ ಹೇಳಿದ್ದಾರೆ.