ನವದೆಹಲಿ: ರಷ್ಯಾ ಮೂಲದ ಸ್ಪುಟ್ನಿಕ್ ವಿ ಲಸಿಕೆಯ ತುರ್ತು ಬಳಕೆಗೆ ಭಾರತದಲ್ಲಿ ಅನುಮೋದನೆ ದೊರೆತಿದೆ. ದೇಶದಲ್ಲಿ ಅನುಮೋದನೆ ಪಡೆದ ಮೂರನೇ ಲಸಿಕೆ ಇದಾಗಿದ್ದು, ಕೇಂದ್ರ ಸರ್ಕಾರ ಈ ಲಸಿಕೆಯ ಕುರಿತು ಮತ್ತೊಮ್ಮೆ ಪರಾಮರ್ಶೆಗೆ ಮುಂದಾಗಿದೆ.
ಸ್ಪುಟ್ನಿಕ್ ವಿ ಲಸಿಕೆಯ ಒಂದೇ ಡೋಸ್ ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಪರಿಣಾಮಕಾರಿಯೇ ಎಂಬ ಕುರಿತು ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಲಸಿಕೆ ಕುರಿತು ಬೇರೆ ದೇಶಗಳಿಂದಲೂ ಮಾಹಿತಿ ಕಲೆ ಹಾಕುತ್ತಿರುವುದಾಗಿ ತಿಳಿದುಬಂದಿದೆ. ದೇಶದಲ್ಲಿ ಕೊರೊನಾ ಮೂರನೇ ಅಲೆ ಆತಂಕ ಎದುರಾಗಿರುವುದರಿಂದ ಹಾಗೂ ಕೊರೊನಾ ಲಸಿಕೆಗಳ ಕೊರತೆ ಎದುರಾಗಿದ್ದು, ಶೀಘ್ರವೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವುದು ಅವಶ್ಯಕವಾದ್ದರಿಂದ ಒಂದೇ ಡೋಸ್ ಲಸಿಕೆ ನೀಡಿದರೆ ಸಾಕೇ ಎಂಬ ಕುರಿತು ಪರಿಶೀಲನೆಗೆ ಮುಂದಾಗಿದೆ.
ಜೊತೆಗೆ ಸ್ಪುಟ್ನಿಕ್ ವಿ ಎರಡನೇ ಡೋಸ್ ಲಸಿಕೆ ಉತ್ಪಾದನೆ ಸಂಬಂಧ ಸ್ಥಳೀಯ ಉತ್ಪಾದಕರಿಗೆ ಕೆಲವು ತೊಡಕುಗಳು ಎದುರಾಗಿದ್ದು, ಜಾಗತಿಕ ವಿಮರ್ಶೆಗೆ ಭಾರತ ಸರ್ಕಾರ ಮುಂದಾಗಿದೆ.
ಸ್ಪುಟ್ನಿಕ್ ವಿ ಲಸಿಕೆಯ ಸ್ಥಳೀಯ ಉತ್ಪಾದಕರಿಗೆ ಎರಡನೇ ಡೋಸ್ ಸ್ಪುಟ್ನಿಕ್ ವಿ ಲಸಿಕೆ ತಯಾರಿಗೆ ಕೆಲವು ಸವಾಲುಗಳು ಎದುರಾಗುತ್ತಿವೆ ಎಂದು ವರದಿ ಹೇಳಿದ್ದು, ಸ್ಪುಟ್ನಿಕ್ ವಿ ಲಸಿಕೆ ಇತರೆ ಲಸಿಕೆಗಳಿಗಿಂತ ಭಿನ್ನವಾಗಿದೆ. ಸ್ಪುಟ್ನಿಕ್ ವಿ ಲಸಿಕೆ ಎರಡು ಡೋಸ್‌ಗಳ ಅಂಶಗಳು ಒಂದಕ್ಕಿಂತ ಒಂದು ಭಿನ್ನ. ಹೀಗಾಗಿ ಇದರ ಉತ್ಪಾದನೆ ಕಷ್ಟಕರವಾಗಿದೆ ಎಂದು ಉಲ್ಲೇಖಿಸಿದೆ. ಈ ತೊಡಕುಗಳು ರಷ್ಯಾ ಮೂಲದ ಈ ಲಸಿಕೆಯ ಜಾಗತಿಕ ವಿಮರ್ಶೆಗೆ ಅನುವು ಮಾಡಿಕೊಟ್ಟಿದೆ.
ರಷ್ಯಾ, ಅರ್ಜೆಂಟಿನಾ ದೇಶಗಳಲ್ಲಿನ ಮಾಹಿತಿ ಪರಿಶೀಲನೆ
ಸ್ಪುಟ್ನಿಕ್ ವಿ ಲಸಿಕೆ ಕುರಿತು ರಷ್ಯಾ ಹಾಗೂ ಅರ್ಜೆಂಟಿನಾ ದೇಶಗಳ ದತ್ತಾಂಶವನ್ನು ಪರಿಶೀಲಿಸುತ್ತಿದ್ದೇವೆ. ಅಗತ್ಯವಿದ್ದಲ್ಲಿ ಭಾರತೀಯ ಜನರ ಮೇಲೆ ಅದರ ದಕ್ಷತೆಯನ್ನು ಪರೀಕ್ಷಿಸಲು ಸ್ಥಳೀಯ ವಿವರಗಳನ್ನು ಪಡೆಯಬಹುದಾಗಿದೆ. ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಡೋಸ್‌ನಿಂದ ಗಣನೀಯ ಪ್ರಯೋಜನವಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಗಣಿಸುವುದು ಮುಖ್ಯ ಎಂದು ಸರ್ಕಾರಿ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸ್ಪುಟ್ನಿಕ್ ಲೈಟ್ ದತ್ತಾಂಶ ಪರಿಶೀಲಿಸುತ್ತಿರುವ DCGI
ಈ ಮಧ್ಯೆ ಭಾರತೀಯ ಔಷಧ ನಿಯಂತ್ರಕ ಸಂಸ್ಥೆ ಡಿಸಿಜಿಐ, ಸ್ಪುಟ್ನಿಕ್ ಲೈಟ್ ಲಸಿಕೆಯ ಮಾಹಿತಿಯನ್ನು ಪರಿಶೀಲಿಸುತ್ತಿದೆ. ಇದು ಸ್ಪುಟ್ನಿಕ್ ವಿ ಲಸಿಕೆಯ ಮೊದಲ ಘಟಕವಾಗಿದ್ದು, ಏಕ ಡೋಸ್‌ನಂತೆ ನೀಡಲು ಯೋಜಿಸಲಾಗಿದೆ.
ಕಳೆದ ತಿಂಗಳು, ಭಾರತದಲ್ಲಿ ಸ್ಪುಟ್ನಿಕ್ ವಿ ಲಸಿಕೆ ಮಾರಾಟ ಹಕ್ಕನ್ನು ಹೊಂದಿರುವ ಡಾ. ರೆಡ್ಡಿ ಲ್ಯಾಬೊರೇಟರಿಗೆ, ರಷ್ಯಾದಲ್ಲಿ ಸ್ಪುಟ್ನಿಕ್ ಲೈಟ್ ಲಸಿಕೆಯ ಮೂರನೇ ಹಂತದ ಪ್ರಯೋಗದ ಸುರಕ್ಷತೆ, ಪರಿಣಾಮಕಾರಿತ್ವ, ದಕ್ಷತೆ ಸಂಬಂಧ ದತ್ತಾಂಶವನ್ನು ತಜ್ಞರ ಸಮಿತಿಗೆ ಸಲ್ಲಿಸಲು ಸೂಚಿಸಲಾಗಿತ್ತು.
ಭಾರತದಲ್ಲಿ ಮಾತ್ರವಲ್ಲ, ಬೇರೆ ದೇಶಗಳಲ್ಲಿಯೂ ಸ್ಪುಟ್ನಿಕ್ ವಿ ಲಸಿಕೆಯ ಎರಡನೇ ಡೋಸ್ ಉತ್ಪಾದನೆ ಸವಾಲಾಗಿದೆ ಎಂದು ತಿಳಿಸಿದೆ.
ಸ್ಪುಟ್ನಿಕ್ ವಿ ಒಂದೇ ಡೋಸ್ ಪರಿಣಾಮಕಾರಿ ಎಂದಿದ್ದ ಅಧ್ಯಯನ
ಸ್ಪುಟ್ನಿಕ್ V ಕೊರೊನಾ ಲಸಿಕೆಯ ಒಂದೇ ಒಂದು ಡೋಸ್‌ನಿಂದ ಪ್ರಬಲ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂದು ಈಚೆಗೆ ಅಧ್ಯಯನವೊಂದು ತಿಳಿಸಿತ್ತು. ಸೆಲ್ ರಿಪೋರ್ಟ್ಸ್‌ನಲ್ಲಿ ಪ್ರಕಟಗೊಂಡಿದ್ದ ಈ ಅಧ್ಯಯನ ವರದಿಯಲ್ಲಿ, ಅರ್ಜೆಂಟಿನಾದಲ್ಲಿ 289 ಆರೋಗ್ಯ ಕಾರ್ಯಕರ್ತರ ಮೇಲೆ ನಡೆಸಿದ ಪ್ರಯೋಗಗಳ ವಿವರವನ್ನು ಹಂಚಿಕೊಳ್ಳಲಾಗಿತ್ತು.. ಲಸಿಕೆ ಕೊರತೆಯ ಈ ಸನ್ನಿವೇಶದಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಿಗೆ ಲಸಿಕೆ ಸಿಗುವಂತಾಗಬೇಕು. ಇದು ಏಕಡೋಸ್ ಲಸಿಕೆ ಉತ್ಪಾದನೆಯಿಂದ ಸಾಧ್ಯವಿದೆ. ಹೀಗಾಗಿ ಒಂದೇ ಡೋಸ್ ಲಸಿಕೆಯಲ್ಲೇ ಪ್ರತಿಕಾಯ ಬೆಳೆಯುತ್ತದೆಯೇ ಎಂಬುದನ್ನು ಪರಿಶೀಲಿಸಲು ಅಧ್ಯಯನ ಕೈಗೊಳ್ಳಲಾಗಿತ್ತು.