ಚಂಡೀಗಡ: ಅಫ್ಗಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ ಹೊಸ ಪ್ರಶ್ನೆ, ಸವಾಲುಗಳನ್ನು ಹುಟ್ಟು ಹಾಕುತ್ತಿದ್ದು, ಇದರಿಂದ ಉಂಟಾಗುವ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಕೇಂದ್ರ ಸರ್ಕಾರ ಸಮರ್ಥವಾಗಿದೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ಇಲ್ಲಿನ ಪಂಜಾಬ್ ವಿಶ್ವವಿದ್ಯಾಲಯ ರಾಷ್ಟ್ರೀಯ ಭದ್ರತೆ ಕುರಿತು ಸೋಮವಾರ ಆಯೋಜಿಸಿದ್ದ ಮೂರನೇ ಬಲರಾಮ್‌ಜಿ ದಾಸ್ ಟಂಡನ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಅಫ್ಗಾನಿಸ್ತಾನದಲ್ಲಿನ ಈ ಬೆಳವಣಿಗೆಗಳ ಲಾಭವನ್ನು ಬಳಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ಪ್ರೋತ್ಸಾಹಿಸಲು ಯಾವುದೇ ದೇಶವಿರೋಧಿ ಶಕ್ತಿಗೆ ಅವಕಾಶ ನೀಡಬಾರದು' ಎಂದು ಸಿಂಗ್ ಸಲಹೆ ನೀಡಿದರು.
'ನೆರೆಯ ಅಫ್ಗಾನಿಸ್ತಾನದಲ್ಲಿ ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆಗಳು, ಭಾರತೀಯರ ರಕ್ಷಣೆ ಜೊತೆಗೆ, ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದಲೂ ಹೊಸ ಸವಾಲುಗಳನ್ನು ಹುಟ್ಟು ಹಾಕುತ್ತಿದೆ. ಎಲ್ಲ ಬೆಳವಣಿಗೆಗಳ ಬಗ್ಗೆ ನಮ್ಮ ಸರ್ಕಾರ ತೀವ್ರ ನಿಗಾವಹಿಸಿದೆ' ಎಂದು ಸಿಂಗ್ ತಿಳಿಸಿದರು.