ಶಿಲ್ಲಾಂಗ್: ಮೇಘಾಲಯದ ಶಿಲ್ಲಾಂಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹಿಂಸಾಚಾರ ನಡೆದಿದೆ. ರಾಜ್ಯದ ಗೃಹ ಸಚಿವರು ರಾಜೀನಾಮೆ ನೀಡಿದ್ದು, ಶಿಲ್ಲಾಂಗ್‌ನಲ್ಲಿ ಎರಡು ದಿನಗಳ ಕಾಲ ಕರ್ಫ್ಯೂ ಜಾರಿಗೊಳಿಸಿ ಆದೇಶ ಹೊರಡಿಸಲಾಗಿದೆ.
ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾಗೆ ಗೃಹ ಸಚಿವರು ರಾಜೀನಾಮೆ ಪತ್ರವನ್ನು ಭಾನುವಾರ ಸಲ್ಲಿಕೆ ಮಾಡಿದ್ದಾರೆ. ಶುಕ್ರವಾರ ಹತ್ಯೆಯಾದ ಚೆಸ್ಟರ್ ಫೀಲ್ಡ್ ತಂಗ್‌ಖಿವ್ (54) ಹತ್ಯೆ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು ಎಂದು ಪತ್ರದಲ್ಲಿ ಮನವಿಯನ್ನು ಮಾಡಿದ್ದಾರೆ.
ನಿಷೇಧಿತ ಹೈನ್ನಿವ್‌ಟ್ರೆಪ್ ನ್ಯಾಷನಲ್ ಲಿಬರೇಷನ್ ಕೌನ್ಸಿಲ್ ಬಂಡುಕೋರ ಸಂಘಟನೆಯ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಅಂತ್ಯಕ್ರಿಯೆ ಭಾನುವಾರ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಕಪ್ಪು ಪಟ್ಟಿ ತೊಟ್ಟು, ಕಪ್ಪು ಬಾವುಟ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡರು.
ಪೊಲೀಸರ ಎನ್‌ಕೌಂಟರ್ ವೇಳೆ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಗಂಭೀರವಾಗಿ ಗಾಯಗೊಂಡಿದ್ದ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದ. ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಹತ್ಯೆ ಖಂಡಿಸಿ ಶಿಲ್ಲಾಂಗ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನೆ ಭಾನುವಾರ ಹಿಂಸಾರೂಪಕ್ಕೆ ತಿರುಗಿದೆ.
ಶಿಲ್ಲಾಂಗ್‌ನ ಹಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದಿದೆ. ಪೊಲೀಸ್ ಚೌಕಿಯನ್ನು ಧ್ವಂಸ ಮಾಡಲಾಗಿದ್ದು, ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಮಂಗಳವಾರ ಸಂಜೆ 5 ಗಂಟೆಯ ತನಕ ಶಿಲ್ಲಾಂಗ್‌ನಲ್ಲಿ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.
ಶನಿವಾರ ಮುಖ್ಯಮಂತ್ರಿ ಕೊನ್ರಾಡ್ ಸಂಗ್ಮಾ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಸಾವಿನ ಕುರಿತು ಮ್ಯಾಜಿಸ್ಟ್ರೇಟ್ ತನಿಖೆ ನಡೆಸುವುದಾಗಿ ಹೇಳಿಕೆ ನೀಡಿದ್ದರು. ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಬಂಧಿಸಲು ಹೋದಾಗ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಪ್ರಯತ್ನ ನಡೆಸಿದ್ದ. ಆಗ ಪೊಲೀಸರು ಗುಂಡು ಹಾರಿಸಿದಾಗ ಆತ ಗಾಯಗೊಂಡಿದ್ದ. ಬಳಿಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ.
ರಾಜ್ಯದ ಖ್ಲಿಯೆರಿಯಾತ್‌ನಲ್ಲಿ ನಡೆದ ಐಇಡಿ ಸ್ಫೋಟ ಪ್ರಕರಣದಲ್ಲಿ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಕೈವಾಡ ಇರುವ ಕುರಿತು ಪೊಲೀಸರಿಗೆ ಸಾಕ್ಷ್ಯ ಸಿಕ್ಕಿತ್ತು. ಆದ್ದರಿಂದ ಮಾವ್ಲೈನಲ್ಲಿರುವ ಚೆಸ್ಟರ್ ಫೀಲ್ಡ್ ತಂಗ್‌ಖಿವ್ ನಿವಾಸ ಮೇಲೆ ಪೊಲೀಸರು ಶುಕ್ರವಾರ ದಾಳಿ ಮಾಡಿದ್ದರು. ಆಗ ಆತ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಪ್ರಯತ್ನ ನಡೆಸಿದ್ದ.
2018ರಲ್ಲಿ ಮೇಘಾಲಯದ ಉಪ ಮುಖ್ಯಮಂತ್ರಿ ಪ್ರೆಸ್ಟೋನ್ ಟೈನ್ಸಾಂಗ್ ಎದುರು ಚೆಸ್ಟರ್ ಫೀಲ್ಡ್ ತಂಗ್‌ಖಿವ್ ಶರಣಾಗಿದ್ದ. ತಂಗ್‌ಖಿವ್ ಮನೆಯಿಂದ ಪೊಲೀಸರು ಲ್ಯಾಪ್‌ಟಾಪ್, ಮೊಬೈಲ್, ಬಂದೂಕು, ಡಿಜಿಟಲ್ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಆರ್. ಚಂದ್ರನಾಥನ್ ಹೇಳಿದ್ದಾರೆ.
ಚೆಸ್ಟರ್ ಫೀಲ್ಡ್ ತಂಗ್‌ಖಿವ್‌ರನ್ನು ಪೊಲೀಸರು ಹತ್ಯೆ ಮಾಡಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಭಾನುವಾರ ಅಂತ್ಯಕ್ರಿಯೆ ನಡೆಯುವ ಸಂದರ್ಭದಲ್ಲಿಯೇ ಹಿಂಸಾಚಾರ ನಡೆದಿದೆ. ಇದರಿಂದಾಗಿ ಶಿಲ್ಲಾಂಗ್‌ನಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗಿದೆ. ಇದರಿಂದಾಗಿ ಎರಡು ದಿನಗಳ ಕಾಲ ಕರ್ಫ್ಯೂ ಹೇರಲಾಗಿದೆ.