ಮಂಗಳೂರು; ಗಲ್ಫ್ ರಾಷ್ಟ್ರಗಳಲ್ಲಿ ಉದ್ಯೋಗದಲ್ಲಿದ್ದು, ಕೊರೊನಾ ಕಾರಣದಿಂದ ಊರಿಗೆ ಬಂದು, ಅತ್ತ ಹೋಗಲಾರದೆ, ಇತ್ತ ಇರಲಾರದೆ ಚಡಪಡಿಸುತ್ತಿರುವ ಜನರಿಗೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಸಿಹಿಸುದ್ದಿ ನೀಡಿದೆ.
ಕಳೆದ ಕೆಲ ತಿಂಗಳುಗಳಿಂದ ಸ್ಥಗಿತವಾಗಿದ್ದ ಮಂಗಳೂರು-ಗಲ್ಫ್ ರಾಷ್ಟ್ರಗಳ ವಿಮಾನಯಾನ ಸೇವೆ ಮತ್ತೆ ಆರಂಭವಾಗಿದೆ. ಈ ಮುಖೇನ ಹಲವು ತಿಂಗಳುಗಳಿಂದ ಮನೆಯಲ್ಲೇ ಇದ್ದ ಗಲ್ಫ್ ರಾಷ್ಟ್ರದಲ್ಲಿ ಉದ್ಯೋಗದಲ್ಲಿದ್ದ ಜನರು ನಿರಾಳರಾಗಿದ್ದಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಅಪೋಲೊ ಡಯಾಗ್ನೋಸ್ಟಿಕ್ಸ್ ನಿಂದ ಸ್ಥಾಪಿತವಾಗಿರುವ ವಿಶ್ವ ದರ್ಜೆಯ ರಾಪಿಡ್ ಆರ್. ಟಿ. ಪಿ. ಸಿ. ಆರ್ ನಿಂದ ಪ್ರಭಾವಕ್ಕೊಳಗಳಾಗಿರುವ ಯುಎಇ ನಾಗರಿಕ ವಿಮಾನಯಾನ ಪ್ರಾಧಿಕಾರ ಮಂಗಳೂರಿನಿಂದ ವಿಮಾನ ಸಂಚಾರಕ್ಕೆ ಹಸಿರು ನಿಶಾನೆಯನ್ನು ತೋರಿದೆ.
ಈ ಹಿನ್ನಲೆಯಲ್ಲಿ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮೊದಲ ವಿಮಾನ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಆಗಸ್ಟ್ 18ರಂದು ಗಲ್ಫ್ ರಾಷ್ಟ್ರಕ್ಕೆ ಹಾರಲಿದೆ. ಇದರಿಂದಾಗಿ ಮಂಗಳೂರು ವಿಮಾನ ನಿಲ್ದಾಣದಿಂದ ವಿಮಾನಯಾನ ಆರಂಭ ವಾಗುವುದನ್ನೇ ಕಾಯುತ್ತಿದ್ದ ಜನರಿಗೆ ಸಂತಸ ತಂದಿದೆ.
ಅಪೋಲೋ ಡಯಾಗ್ನೆಸ್ಟಿಕ್‌ನಿಂದ ನಡೆಸಲಾಗುವ ಕ್ಷಿಪ್ರ ಆರ್. ಟಿ. ಪಿ. ಸಿ. ಆರ್ ಸೌಲಭ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಜಿಲ್ಲಾಡಳಿತದ ಬೆಂಬಲದೊಂದಿಗೆ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದ್ದು, ಇದರಿಂದ ಸಾವಿರಾರು ಜನರಿಗೆ ವರದಾನವಾಗಲಿದೆ.
ಭಾರತದಲ್ಲಿ ಕೊರೊನಾ ಆತಂಕ ಇರುವ ಹಿನ್ನಲೆಯಲ್ಲಿ ಯುಎಇ ಸರ್ಕಾರ ಹಲವು ನಿಯಮಗಳನ್ನು ಮಾಡಿದೆ. ಪ್ರತಿ ಪ್ರಯಾಣಿಕ ವಿಮಾನ ಹತ್ತುವ 6 ಗಂಟೆಗಳ ಮೊದಲು ವಿಮಾನ ನಿಲ್ದಾಣದಲ್ಲಿ ಆರ್. ಟಿ. ಪಿ. ಸಿ. ಆರ್ ನೆಗೆಟಿವ್ ವರದಿಯನ್ನು ಹೊಂದಿರಲೇಬೇಕೆಂಬ ನಿಯಮವನ್ನು ಮಾಡಿತ್ತು.
ಸದ್ಯ ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಈ ಆರ್. ಟಿ. ಪಿ. ಸಿ. ಆರ್ ವ್ಯವಸ್ಥೆ ಅತ್ಯಾಧುನಿಕ ತಂತ್ರಜ್ಞಾನ ವನ್ನು ಹೊಂದಿದೆ. ಅಲ್ಲದೇ ಅಪೋಲೊದ ನುರಿತ ವೈದ್ಯರ ತಂಡವನ್ನೂ ಹೊಂದಿದೆ. ಎಲ್ಲಾ ಕೋವಿಡ್ ನಿಯಮಗಳೊಂದಿಗೆ ಎಲ್ಲಾ ಪ್ರಯಾಣಿಕರ ಕೊರೊನಾ ಪರೀಕ್ಷೆ ಮಾಡಲಾಗುತ್ತದೆ.
ಹೀಗಾಗಿ ಗಲ್ಫ್ ರಾಷ್ಟ್ರಗಳಿಗೆ ತೆರಳುವ ಪ್ರಯಾಣಿಕರು ಕಡ್ಡಾಯವಾಗಿ ವಿಮಾನ ಹತ್ತುವ 6 ಗಂಟೆಯ ಒಳಗೆ ವಿಮಾನ ನಿಲ್ದಾಣದಲ್ಲಿ ಇರಬೇಕೆಂದು ವಿಮಾನ ನಿಲ್ದಾಣ ಪ್ರಾಧಿಕಾರ ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಮಂಗಳೂರಿನ ವಿಮಾನ ನಿಲ್ದಾಣ ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ಹಲವು ಕ್ರಮಗಳನ್ನು ಕೈಗೊಂಡಿದೆ. ಕೊರೊನಾ ಸೋಂಕು ತಡೆಗಟ್ಟುವ ಹಿನ್ನಲೆಯಲ್ಲಿ ಎಲ್ಲಾ ಕ್ರಮಗಳನ್ನು ವಿಮಾನ ನಿಲ್ದಾಣ ದಲ್ಲಿ ಮಾಡಲಾಗಿದೆ. ದೇಶಿಯ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ವಿದೇಶಿ ವಿಮಾನಯಾನ ಅಧಿಕಾರಿಗಳ ಜೊತೆ ಮಂಗಳೂರು ವಿಮಾನನಿಲ್ದಾಣದ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ.
ಮಂಗಳೂರಿನಿಂದ ಯುಎಇ ರಾಷ್ಟ್ರಗಳಿಗೆ ವಿಮಾನಯಾನ ಆರಂಭವಾಗಿರೋದಕ್ಕೆ ಗಲ್ಫ್ ರಾಷ್ಟ್ರದ ಉದ್ಯೋಗಿಗಳು ಖುಷಿಯಾಗಿದ್ದಾರೆ. ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಗಲ್ಫ್ ರಾಷ್ಟ್ರದ ಉದ್ಯೋಗಿ ಸಂಜೀವ್, "ವರ್ಷದ ಹಿಂದೆ ರಜೆಯಿಂದ ಮನೆಗೆ ಬಂದಿದ್ದೆ. ಆದರೆ ಆನಂತರ ಕೊರೊನಾ ಆರಂಭವಾಯಿತು. ಕೊರೊನಾ ಎರಡನೇ ಅಲೆ ಮುಗಿದರೂ ವಿಮಾನಯಾನ ಆರಂಭವಾಗಲಿಲ್ಲ. ಕೆಲಸವಿಲ್ಲದೆ ಬಹಳ ಕಷ್ಟ ಅನುಭವಿಸಬೇಕಾಯಿತು. ಕಂಪೆನಿಯೂ ಕೊರೊನಾ ಕಾರಣದಿಂದ ಕರೆಯಲಿಲ್ಲ. ಸದ್ಯ ಈಗ ವಿಮಾನಯಾನ ಆರಂಭವಾಗಿದೆ. ಜೀವನ ಮತ್ತೆ ಆರಂಭವಾಗುವ ನಿರೀಕ್ಷೆಯಿದೆ" ಎಂದು ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳು ಸಹ ಬುಕ್ಕಿಂಗ್ ಆರಂಭಿಸಿದ್ದೇವೆ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಪ್ರಕಟಿಸಿವೆ. ಉದ್ಯೋಗಕ್ಕಾಗಿ ತೆರಳುವ ಜನರಿಗೆ ಇದರಿಂದಾಗಿ ಸಹಾಯಕವಾಗಿವೆ.