ಲಕ್ನೋ: ನಾವು ದೇಶದ ಒಬ್ಬ ಸಮರ್ಥ ನಾಯಕನನ್ನು ಕಳೆದುಕೊಂಡಿದ್ದೇವೆ. ಕಲ್ಯಾಣ್ ಸಿಂಗ್ ಅವರ ಮೌಲ್ಯಗಳು ಮತ್ತು ನಿರ್ಣಯಗಳನ್ನು ನಮ್ಮ ಕೆಲಸಗಳಲ್ಲಿ ಅಳವಡಿಸಿಕೊಂಡು ಅವರಿಗೆ ಪರ್ಯಾಯವಾಗಿ ಸಾಧ್ಯವಾದಷ್ಟು ಬಳಸಿಕೊಳ್ಳಲು ಪ್ರಯತ್ನಿಸೋಣ, ಅವರು ಕಂಡಿದ್ದ ಕನಸುಗಳನ್ನು ನನಸು ಮಾಡಲು ಶ್ರಮಿಸೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.
ಅವರು ಇಂದು ಉತ್ತರ ಪ್ರದೇಶದ ಲಕ್ನೋಗೆ ಆಗಮಿಸಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಮಾಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.
ಕಲ್ಯಾಣ್ ಸಿಂಗ್ ಅವರಿಗೆ ದೇವರು ಸ್ವರ್ಗದಲ್ಲಿ ಒಂದು ಸ್ಥಾನವನ್ನು ನೀಡಲಿ, ಅವರ ಕುಟುಂಬಸ್ಥರಿಗೆ ಅವರ ಅಗಲುವಿಕೆಯಿಂದ ಆಗಿರುವ ನಷ್ಟವನ್ನು ಭರಿಸುವ ಶಕ್ತಿಯನ್ನು ನೀಡಲಿ ಎಂದು ನಾನು ರಾಮ ದೇವರನ್ನು ಪ್ರಾರ್ಥಿಸಿಕೊಳ್ಳುತ್ತೇನೆ ಎಂದರು.
ಕಲ್ಯಾಣ್ ಸಿಂಗ್ ಅವರ ಪುತ್ರ ಬಿಜೆಪಿ ಸಂಸದ ರಾಜ್ ವೀರ್ ಸಿಂಗ್ ತಮ್ಮ ತಂದೆಯ ಅಂತಿಮ ದರ್ಶನ ಮಾಡುವ ಸಂದರ್ಭದಲ್ಲಿ ಕಣ್ಣೀರು ಹಾಕಿದರು. ತಂದೆಯವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲ, ಆದರೆ ಅವರ ಅಪೂರ್ಣಗೊಂಡಿರುವ ಕೆಲಸಗಳನ್ನು ಪೂರ್ಣ ಮಾಡಲು ಶ್ರಮಿಸುತ್ತೇವೆ. ಅವರು ಜನರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಅಜರಾಮರ, ನಮ್ಮನ್ನು ಬಿಟ್ಟು ಹೋಗಿಲ್ಲ ಎಂದು ಭಾವಪರವಶರಾದರು.
ಬಹು ಅಂಗಾಂಗ ವೈಫಲ್ಯದಿಂದ ನಿಧನರಾದ ಬಿಜೆಪಿ ಹಿರಿಯ ನಾಯಕ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಅಂತಿಮ ದರ್ಶನ ಪಡೆಯಲು ಲಖನೌಗೆ ಬಂದ ಪ್ರಧಾನಿಯವರನ್ನು ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬರಮಾಡಿಕೊಂಡರು. ಈ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಇದ್ದರು. ಇನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್, ಗೃಹ ಸಚಿವ ಅಮಿತ್ ಶಾ ಮತ್ತಿತರ ಗಣ್ಯರೂ ಕೂಡ ಕಲ್ಯಾಣ್ ಸಿಂಗ್ ಅಂತಿಮ ದರ್ಶನ ಪಡೆದಿದ್ದಾರೆ.
ನಾಳೆ ಅಂತ್ಯಕ್ರಿಯೆ: ಕಲ್ಯಾಣ್ ಸಿಂಗ್ ಅಂತ್ಯಕ್ರಿಯೆ ನಾಳೆ ನರೋರಾದಲ್ಲಿರುವ ಗಂಗಾ ನದಿಯ ದಡದಲ್ಲಿ ನಡೆಯಲಿದೆ. ಕಲ್ಯಾಣ್ ಸಿಂಗ್ ಮೃತದೇಹವನ್ನು ಇಂದು ವಿಧಾನಸಭೆಗೆ ತೆಗೆದುಕೊಂಡು ಹೋಗಿ, ಅಲ್ಲಿಡಲಾಗಿದ್ದು, ಅಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಂತರ ಅಲ್ಲಿಂದ ಬಿಜೆಪಿ ಕಚೇರಿಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಅಂತಿಮ ದರ್ಶನ ಪಡೆಯಲು 2.30ರವರೆಗೆ ಅವಕಾಶ ಇದೆ.
ಅದಾದ ಮೇಲೆ ಪಾರ್ಥಿವ ಶರೀರವನ್ನು ಅಲಿಗಡ್ನ ಸ್ಟೇಡಿಯಂಗೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಸಾಮಾನ್ಯ ಜನರು ತಮ್ಮ ಅಂತಿಮ ಗೌರವ ಸಲ್ಲಿಸಬಹುದು. ಅಲ್ಲಿಂದ ಪಾರ್ಥಿವ ಶರೀರವನ್ನು ಅಟ್ರೌಲಿಗೆ ಕೊಂಡೊಯ್ದು ನಾಳೆ ಅಂತಿಮ ವಿಧಿವಿಧಾನ ನಡೆಯಲಿದೆ.