ನವದೆಹಲಿ: ಮುಂದಿನ ಕೆಲವು ದಶಕಗಳಲ್ಲಿ ಭಾರತ ಉಪಖಂಡದಾದ್ಯಂತ ಉಷ್ಣಮಾರುತ ಹಾಗೂ ಬರ ಹೆಚ್ಚಾಗಲಿದೆ ಜೊತೆಗೆ ಮಳೆ ಸುರಿಯುವಿಕೆ ಹಾಗೂ ಚಂಡಮಾರುತಗಳ ಹಾವಳಿಯೂ ಅಧಿಕವಾಗಲಿದೆ ಎಂದು ಸೋಮವಾರ ಬಿಡುಗಡೆಯಾದ ಹವಾಮಾನ ಬದಲಾವಣೆ ಕುರಿತ ಅಂತರ್ ಸರಕಾರ ಸಮಿತಿ (ಐಪಿಸಿಸಿ)ಯ ವರದಿ ತಿಳಿಸಿದೆ.
'ಹವಾಮಾನ ಬದಲಾವಣೆ 2021: ಭೌತಿಕ ವಿಜ್ಞಾನ ಆಧರಿತ' ಶೀರ್ಷಿಕೆಯ ಆರನೆ ಮೌಲ್ಯಮಾಪನ ವರದಿಯ ಮೊದಲ ಭಾಗವನ್ನು 195 ಸರಕಾರಗಳ ಸಹಯೋಗದೊಂದಿಗೆ ವಿಜ್ಞಾನಿಗಳು ಅಂತಿಮಗೊಳಿಸಿದ್ದಾರೆ. 21ನೇ ಶತಮಾನದಲ್ಲಿ ಉಷ್ಣಮಾರುತ ಹಾಗೂ ತೇವಭರಿತ ತಾಪಮಾನವು ಹೆಚ್ಚು ತೀವ್ರವಾಗಿರುವುದು ಹಾಗೂ ಆಗಾಗ್ಗೆ ಮರುಕಳಿಸಲಿದೆ. ವಾರ್ಷಿಕವಾಗಿಯೂ ಹಾಗೂ ಮುಂಗಾರಿನಲ್ಲಿಯೂ ಮಳೆ ಸುರಿಯುವಿಕೆಯು ಅಧಿಕವಾಗಲಿದೆ ಎಂದು ವರದಿ ತಿಳಿಸಿದೆ.
1850-1950ರ ಅವಧಿಗೆ ಹೋಲಿಸಿದರೆ ಮೇಲ್ಮೈ ತಾಪಮಾನದಲ್ಲಿ ಏರಿಕೆಯಾಗಿರುವುದು ಸ್ಪಷ್ಟವಾಗಿ ಗಮನಕ್ಕೆ ಬಂದಿದೆ.ಒಂದೆಡೆ ತಾಪಮಾನದಲ್ಲಿ ಅತಿಯಾದ ಹೆಚ್ಚಳವಾಗುತ್ತಿದ್ದರೆ, ಇನ್ನೊಂದೆಡೆ ಚಳಿಯ ತೀವ್ರತೆ ಕಡಿಮೆಯಾಗತೊಡಗಿದೆ ಎಂದು ವರದಿ ಹೇಳಿದೆ. ಏಶ್ಯದ ಬಹುತೇಕ ಭಾಗಗಳಲ್ಲಿಯೂ ಮಳೆ ಸುರಿಯುವಿಕೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಅದು ಹೇಳಿದೆ. 20ನೇ ಶತಮಾನದ ದ್ವಿತೀಯಾರ್ಧದಲ್ಲಿ ದಕ್ಷಿಣ ಹಾಗೂ ಆಗ್ನೇಯ ಮುಂಗಾರು ದುರ್ಬಲಗೊಂಡಿದೆ. ಅತಿಯಾದ ಮಾನವ ಚಟುವಟಿಕೆಗಳಿಂದಾಗಿ ವಾತಾವರಣದಲ್ಲಿ ದ್ರವ ಅಥವಾ ಅನಿಲ ಕಣ (ಅಸೆನೋಲ್)ಗಳಲ್ಲಿ ಹೆಚ್ಚಳವಾಗಿರುವುದೇ ಇದಕ್ಕೆ ಕಾರಣ ಎಂದು ಅದು ಹೇಳಿದೆ.
ಪೂರ್ವ ಏಶ್ಯದಲ್ಲಿ ಬೇಸಿಗೆಯ ಮುಂಗಾರಿನ ಮಳೆ ಸುರಿಯುವಿಕೆಯಲ್ಲಿ ಏರುಪೇರು ಉಂಟಾಗಿದ್ದು, ಉತ್ತರ ಭಾಗದಲ್ಲಿ ಒಣವಾತಾವರಣ ಹೆಚ್ಚಾಗಿದ್ದರೆ, ದಕ್ಷಿಣ ಭಾಗದಲ್ಲಿ ತೇವಾಂಶದ ವಾತಾವರಣ ಅಧಿಕವಾಗತ್ತಿದೆ. ಹಸಿರುಮನೆ ಅನಿಲಗಳು ಹಾಗೂ ಘನ ಮತ್ತು ದ್ರವಣ ಅನಿಲಕಣಗಳ ಸಂಯೋಜನೆಯ ಪರಿಣಾಮದಿಂದಾಗಿ ಹೀಗಾಗಿ ಎಂದು ವರದಿ ಹೇಳಿದೆ.
''ಹಿಂದೂ ಮಹಾಸಾಗರದಲ್ಲಿ ಸಮುದ್ರ ತಾಪಮಾನವು ಇತರ ಪ್ರದೇಶಗಳಿಗಿಂತ ಅಧಿಕ ಪ್ರಮಾಣದಲ್ಲಿದ್ದು, ಇದು ಇತರ ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತದೆಯೆಂದ ವರದಿಯ ಸಹ ಲೇಖಕರಾದ ಐಐಟಿ ಮದ್ರಾಸ್ ನ ಉಪನ್ಯಾಸಕಿ ಡಾ. ಸ್ವಪ್ನಾ ಪಾನಿಕ್ಕಲ್ ಹೇಳುತ್ತಾರೆ.
ಹಿಂದೂ ಮಹಾಸಾಗರದ ಸಮುದ್ರಮಟ್ಟವು ವಾರ್ಷಿಕ ಜಾಗತಿಕ ಸರಾಸರಿಗಿಂತ 3.7 ಮೀಟರ್ ಗಳಷ್ಟು ಏರಿಕೆಯಾಗುತ್ತಿದೆ ಎಂದು ಆಕೆ ಹೇಳಿದ್ದಾರೆ. ಸಮುದ್ರ ಮಟ್ಟದಲ್ಲಿ ಅತಿಯಾದ ಹೆಚ್ಚಳವು ಈ ಹಿಂದೆ 100 ವರ್ಷಗಳಿಗೊಮ್ಮೆ ಸಂಭವಿಸುತ್ತಿದ್ದರೆ, ಈಗ ಪ್ರತಿ ವರ್ಷವೂ ಏರಿಕೆ ಕಂಡುಬರುತ್ತಿದೆ ಎಂದು ಆಕೆ ಹೇಳಿದ್ದಾರೆ.
ಹಿಂದೂ ಮಹಾಸಾಗರದ ಸಮುದ್ರ ಮಟ್ಟದಲ್ಲಿ ಏರಿಕೆಯು ಜಾಗತಿಕ ಸರಾಸರಿಗಿಂತ ತೀವ್ರವಾಗಿ ಹೆಚ್ಚಳವಾಗುತ್ತಿದೆ ಎಂದು ವರದಿ ಹೇಳಿದೆ. ಮುಂಬರುವ ದಶಕಗಳಲ್ಲಿ ಹವಾಮಾನ ಬದಲಾವಣೆಯಲ್ಲಿ ತೀವ್ರವಾಗಿ ಹೆಚ್ಚಾಗಲಿದೆ. ಜಾಗತಿಕ ತಾಪಮಾನದಲ್ಲಿ 1.5 ಡಿಗ್ರಿ ಸಿ. ಹೆಚ್ಚಳವಾಗಿರುವುದರಿಂದ, ಉಷ್ಣಮಾರುತ ಅಧಿಕವಾಗಲಿದೆ ಹಾಗೂ ಬೇಸಿಗೆಯ ಋತು ಅಧಿಕವಾಗಲಿದೆ ಹಾಗೂ ಚಳಿಯ ಋತು ಕಡಿಮೆಯಾಗಲಿದೆ ಎಂದು ವರದಿ ತಿಳಿಸಿದೆ.