ಬದಿಯಡ್ಕ: ಚೆರ್ಕಳ- ಕಲ್ಲಡ್ಕ ರಾಜ್ಯ ಹೆದ್ದಾರಿಯ ಮೆಕ್ಡಾಂ ಡಾಮರೀಕರಣ ಬಹುತೇಕ ಪೂರ್ಣಗೊಳ್ಳುವ ಹಂತದಲ್ಲಿದ್ದು, ಈ ಮಧ್ಯೆ ಕಾಮಗಾರಿ ಕಳೆದೊಂದು ತಿಂಗಳಿಂದ ಸಂಪೂರ್ಣ ಮೊಟಕುಗೊಂಡು ಭಾರೀ ಸಮಸ್ಯೆ ಸೃಷ್ಟಿಸಿದೆ.
ರಾಜ್ಯ ಹೆದ್ದಾರಿಯ ಎಡನೀರು ಪರಿಸರದ ರಸ್ತೆ ಸಂಪೂರ್ಣ ಕೆಸರು ಗದ್ದೆಯಂತೆ ಮಾರ್ಪಟ್ಟಿದ್ದು, ವಾಹನ ಸಂಚಾರ ಜಟಿಲ ಮತ್ತು ಅಪಾಯಕಾರಿಯಾಗಿದೆ.
ಕಿಫ್ಬಿ (ಕೇರಳ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‍ಮೆಂಟ್ ಫಿನಾನ್ಸ್ ಬೋರ್ಡ್) ಪಿಡಬ್ಲ್ಯೂಡಿ 006-17 ಪರಿಗಣನೆಯಂತೆ ಚೆರ್ಕಳದಿಂದ ಕರ್ನಾಟಕ ಗಡಿ ಭಾಗ ಸಾರಡ್ಕ ತನಕದ 29 ಕಿ.ಮೀ. ರಸ್ತೆಯ ನವೀಕರಣಕ್ಕೆ 67.15 ಕೋಟಿ ರೂ. ಮಂಜೂರಾಗಿದ್ದು, ಚೆರ್ಕಳದಿಂದ ಉಕ್ಕಿನಡ್ಕ ಮತ್ತು ಉಕ್ಕಿನಡ್ಕದಿಂದ ಕರ್ನಾಟಕ ಗಡಿಭಾಗ ಅಡ್ಕಸ್ಥಳ ಸಾರಡ್ಕ ಎರಡು ಹಂತಗಳಲ್ಲಿನಡೆಯುತ್ತಿದೆ.
ಚೆರ್ಕಳದಿಂದ ಉಕ್ಕಿನಡ್ಕದವರೆಗಿನ 19 ಕಿ.ಮೀ. ಕಾಮಗಾರಿ 39.76 ಕೋಟಿ ಹಾಗೂ ಉಕ್ಕಿನಡ್ಕದಿಂದ ಅಡ್ಕಸ್ಥಳ ಸಾರಡ್ಕ ಗಡಿಯವರೆಗಿನ (10 ಕಿ.ಮೀ. ಕಾಮಗಾರಿ) 27.39 ಕೋಟಿ ಅನುದಾನದಲ್ಲಿನಡೆಯುತ್ತಿದೆ. ಉಕ್ಕಿನಡ್ಕದಿಂದ ಅಡ್ಕಸ್ಥಳ ಸಾರಡ್ಕ ತನಕದ ಮೆಕ್ಕಡಾಂ ಡಾಮರೀಕರಣ ಪೂರ್ಣವಾಗಿದೆ. ಪಳ್ಳತ್ತಡ್ಕದಿಂದ ಎದುರ್ತೋಡಿನ ವರೆಗೂ ಒಂದನೇ ಹಂತದ ಕಾಮಗಾರಿ ಪೂರ್ಣಗೊಂಡು ರಸ್ತೆ ಸುಸ್ಥಿತಿಯಲ್ಲಿದೆ. ಆದರೆ ಎದುರ್ತೋಡಿನಿಂದ ಎಡನೀರು ವರೆಗಿನ 2 ಕಿಲೋಮೀಟರ್ ರಸ್ತೆಯಲ್ಲಿ ಟಾರಿಂಗ್ ನಡೆದಿಲ್ಲ. ಜೊತೆಗೆ ರಸ್ತೆಯನ್ನು ಅಗೆದು ಹಳೆಯ ಟಾರಿಂಗ್ ಕಿತ್ತೆಸೆಯಲಾಗಿದೆ. ಇದೀಗ ಮಳೆಯಿಂದ ಗದ್ದೆಯಂತೆ ಮಾರ್ಪಟ್ಟಿದ್ದು, ಸೃಷ್ಟಿಯಾಗಿರುವ ಬೃಹತ್ ಹೊಂಡಗಳಲ್ಲಿ ಮಳೆ ನೀರು ಕಟ್ಟಿನಿಂತು ಬೃಹತ್ ಹಳ್ಳಗಳಂತೆ ಕಾಣಿಸುತ್ತಿದೆ. ವಾಹನ ಸಂಚಾರ ದುಸ್ಥರವಾಗಿದ್ದು, ರಸ್ತೆ ಜಾರಿಕೊಳ್ಳುತ್ತಿರುವುದರಿಂದ ದ್ವಿಚಕ್ರ ವಾಹನಗಳೆ ಅನೇಕ ಅಪಘಾತಕ್ಕೀಡಾಗುತ್ತಿವೆ.
ಕಾರು, ಬಸ್, ಲಾರಿಗಳಂತೂ ಈ ರಸ್ತೆಯಲ್ಲಿ ಸಾಗುವುದು ದೊಡ್ಡ ಸಾಹಸವೆಂದೇ ಹೇಳುತ್ತಿದ್ದಾರೆ. ಖಾಸಗೀ ವಾಹನಗಳು ಒಳ ಪ್ರದೇಶವಾದ ಪಾಡಿ ರಸ್ತೆಯ ಮೂಲಕ ಸಂಚರಿಸುತ್ತಿವೆ.
ಗುತ್ತಿಗೆದಾರರ ಅಸಡ್ಡೆಯಿಂದ ಕೇವಲ ಎರಡು ಕಿಲೋಮೀಟರ್ ರಸ್ತೆಯ ಕಾಮಗಾರಿ ಅಪೂರ್ಣಗೊಂಡಿದೆ. ಕೋವಿಡ್ ನಿಯಂತ್ರಣಗಳ ಬಳಿಕ ಮೊಟಕುಗೊಂಡಿದ್ದ ಬಸ್ ಸಂಚಾರ ಇದೀಗ ಮತ್ತೆ ಆರಂಭಗೊಂಡಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಬಸ್ ಸಂಚಾರ ಆರಂಭಿಸಬೇಕೇ, ಬೇಡವೇ ಎಂಬಷ್ಟು ಬಸ್ ಮಾಲಕರು ಚಿಂತಿಸುತ್ತಿದ್ದಾರೆ.
ಉತ್ತರದ ಕಾಲಡಿಯೆಂದೇ ಕರಾವಳಿಯಲ್ಲಿ ಹೆಸರುಪಡೆದಿರುವ ಶ್ರೀಮದ್ ಎಡನೀರು ಮಠದಲ್ಲಿ ಪ್ರಸ್ತುತ ನೂತನ ಯತಿವರ್ಯರ ಪ್ರಥಮ ಚಾತುರ್ಮಾಸ್ಯ ನಡೆಯುತ್ತಿದ್ದು, ಪುತ್ತೂರು ಸಹಿತ ಕರ್ನಾಟಕದ ವಿವಿಧೆಡೆಗಳಿಂದ ದಿನನಿತ್ಯ ನೂರಾರು ಜನರು ಇದೇ ರಸ್ದತೆಯ ಮೂಲಕ ಆಗಮಿಸುತ್ತಿದ್ದು, ಒಮ್ಮೆ ಬಂದವರು ಇನ್ನು ಈ ರಸ್ತೆಯ ಮೂಲಕ ಬರಲಾಗದು. ಬದಲಿ ರಸ್ತೆ ವ್ಯವಸ್ಥೆ ಇದೆಯೇ ಎಂದು ಕೇಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ಪ್ರಸ್ತುತ ಶೋಚನೀಯಾವಸ್ಥೆಯಲ್ಲಿರುವ ರಸ್ತೆಯ ಸಂಚಾರ ದುಸ್ತರವಾಗಿದೆ. ದಶಕಗಳಿಂದ ಸಂಚಾರ ದುಸ್ಥಿತಿಯಿಂದ ಕೂಡಿರುವ ಚೆರ್ಕಳ ಕಲ್ಲಡ್ಕ ರಾಜ್ಯ ಹೆದ್ದಾರಿಯ ದುರಸ್ತಿ ಪ್ರಕ್ರಿಯೆ ಕಳೆದ ಎರಡೂವರೆ ವರ್ಷಗಳಿಂದಲೂ ಪೊಳ್ಳು ನವಗಳೊಂದಿಗೆ ಕುಂಟುತ್ತಿರುವುದು ಆಶ್ಚರ್ಯಕ್ಕೂ ಎಡೆಮಾಡಿದೆ. ಹಲವು ಬಾರಿ ಗುತ್ತಿಗೆ ದಾರರು ಬದಲಾಗಿದ್ದು, ರಸ್ತೆ ಕಾಮಗಾರಿಗೆ ಆಗ್ರಹಿಸಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ, ವಿವಿಧ ಪಕ್ಷಗಳ ಮುಖಂಡರ ನೇತೃತ್ವದಲ್ಲಿ ಈ ಹಿಂದೆ ಅನಿರ್ದಿಷ್ಟಾವಧಿ ಹೋರಾಟ, ರಸ್ತೆ ತಡೆ, ಅಳು ಸಮರ, ಲೋಕೋಪಯೋಗಿ ಇಲಾಖೆ ಮುತ್ತಿಗೆ, ಸೆಗಣಿ ಸಮರ ಅಲ್ಲದೆ ಬಿಜೆಪಿ ಕಾಸರಗೋಡು ಸೇರಿದಂತೆ ಸ್ಥಳೀಯ ಸಮಿತಿಗಳ ನೇತೃತ್ವದಲ್ಲಿ ಅಲ್ಲಲ್ಲಿರಸ್ತೆ ತಡೆದು, ಚಕ್ರಸ್ತಂಭನ ಚಳವಳಿ, ಆಟೋ ಟ್ಯಾಕ್ಸಿ ಚಾಲಕರು ಬಾಳೆ ಗಿಡ ನೆಡುವ ಮೂಲಕ ಪ್ರತಿಭಟಿಸಿದ್ದರಲ್ಲದೆ ನಾಗರಿಕರು ಸಾಮಾಜಿಕ ಜಾಲತಾಣದಲ್ಲಿ ಪ್ರಬಲ ಆಕ್ರೋಶ ವ್ಯಕ್ತಪಡಿಸಿದ್ದರು.
ಕಾಮಗಾರಿ ಪೂರ್ಣಗೊಳಿಸಿ ಸಂಚಾರಕ್ಕೊದಗಿರುವ ತೊಡಕನ್ನು ನಿವಾರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಅಭಿಮತ:
ಎದುರ್ತೋಡು ವರೆಗೆ ಕಾಮಗಾರಿ ತಲಪುತ್ತಿದ್ದಂತೆ ಮಳೆಗಾಲ ಆರಂಭಗೊಂಡು ಮಳೆ ಬಿರುಸುಗೊಂಡಿದ್ದರಿಂದ ಕಾಮಗಾರಿಯನ್ನು ನಿಲ್ಲಿಸಬೇಕಾಯಿತು. ಅದರೆ ಜೊತೆಗೆ ಇದೀಗ ಕಾಮಗಾರಿ ವೇಗ ಪಡೆದಿಲ್ಲ ಎಂದು ಕಿಪ್ಬಿಯು ತಡೆಯಾಜ್ಞೆ ನೀಡಿದ್ದು, ತಾತ್ಕಾಲಿಕವಾಗಿ ಏನೂ ಮಾಡುವಂತಿಲ್ಲ. ಶೀಘ್ರ ಇರುವ ಕಾನೂನು ತೊಡಕನ್ನು ಬಗೆಹರಿಸಿ, ಮುಂದಿನ ಒಂದು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುವುದು.
ಮಗೇಶ್ ಕೆ., ಸಹಾಯಕ ಎಂಜಿನಿಯರ್, ಪಿಡಬ್ಲ್ಯೂಡಿ ಬದಿಯಡ್ಕ ಉಪ ವಿಭಾಗ.