ವಾಷಿಂಗ್ಟನ್: ಅಫ್ಘಾನಿಸ್ತಾನ ರಾಜಧಾನಿ ಕಾಬೂಲಿನಿಂದ ಹೊರಟಿದ್ದ ಅಮೆರಿಕ ವಾಯುಪಡೆಯ ವಿಮಾನ ಹಾರಾಟ ನಡೆಸುವ ವೇಳೆ ಅದನ್ನು ಹಿಡಿದುಕೊಂಡಿದ್ದ ಇಬ್ಬರು ವ್ಯಕ್ತಿಗಳು ಆಗಸದಿಂದ ಕೆಳಕ್ಕೆ ಬಿದ್ದು ಮೃತಪಟ್ಟ ಘಟನೆ ಇನ್ನೂ ಮಾಸಿಲ್ಲ. ಈ ಸಮಯದಲ್ಲಿ ಈ ಘಟನೆಯನ್ನು ಅಣಕ ಮಾಡುವ ಟೀ ಶರ್ಟ್ ಗಳನ್ನು ಅಮೆರಿಕದ ಜನಪ್ರಿಯ ಇ ಕಾಮರ್ಸ್ ತಾಣದಲ್ಲಿ ಮಾರಾಟಕ್ಕಿಟ್ಟಿರುವುದು ವಿವಾದಕ್ಕೆ ಕಾರಣವಾಗಿದೆ.
ಆ ಟೀ ಶರ್ಟಿನಲ್ಲಿ ವಿಮಾನದಿಂದ ಇಬ್ಬರು ವ್ಯಕ್ತಿಗಳು ಕೆಳಕ್ಕೆ ಬೀಳುತ್ತಿರುವ ಚಿತ್ರವನ್ನು ಅಚ್ಚು ಹಾಕಲಾಗಿದ್ದು, ಪಕ್ಕದಲ್ಲಿ 'ಕಾಬೂಲ್ ಸ್ಕೈ ಡೈವಿಂಗ್ ಕ್ಲಬ್' ಎಂದು ಹಾಸ್ಯ ಮಾಡಲಾಗಿದೆ. ತಾಲಿಬಾನ್ ಆಡಳಿತಕ್ಕೆ ಹೆದರಿ ರಕ್ಷಣೆಗಾಗಿ ಮೊರೆಯಿಡುತ್ತಾ ವಿಮಾನಕ್ಕೆ ಆತುಕೊಂಡು ಮೃತಪಟ್ಟ ವ್ಯಕ್ತಿಗಳ ಸಾವನ್ನು ಸ್ಕೈ ಡೈವಿಂಗ್ ಸಾಹಸ ಕ್ರೀಡೆಗೆ ಹೋಲಿಸಿ ಅಣಕ ಮಾಡಿರುವುದರ ವಿರುದ್ಧ ಇಂಟರ್ನೆಟ್ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವಿನ್ಯಾಸದ ಟೀಶರ್ಟುಗಳನ್ನು ಹಲವು ಚಿಕ್ಕ ಪುಟ್ಟ ವಸ್ತ್ರ ತಯಾರಕ ಸಂಸ್ಥೆಗಳು ನಕಲು ಮಾಡಿದ್ದು, ಅಮೆರಿಕದ ಇ ಕಾಮರ್ಸ್ ತಾಣವಾದ ಎಟ್ಸಿ ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ಇ ಕಾಮರ್ಸ್ ಸಂಸ್ಥೆ ಈ ಟೀ ಶರ್ಟುಗಳ ಮಾರಾಟವನ್ನು ಸ್ಥಗಿತಗೊಳಿಸಿ ಅವುಗಳಿಗೆ ನಿಷೇಧ ಹೇರಬೇಕೆನ್ನುವ ಒತ್ತಾಸೆ ಇದೇ ವೇಳೆ ಕೇಳಿಬಂದಿದೆ.