ತಿರುವನಂತಪುರ: ಕೋವಿಡ್ ಮಾನದಂಡ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಶ್ರಮಿಸುತ್ತಿರುವ ಪೊಲೀಸರು, ಮಾಸ್ಕ್ ಧರಿಸದೆ ಸಾರ್ವಜನಿಕ ಪ್ರದೇಶದಲ್ಲಿ ಸುತ್ತಾಡುತ್ತಿದ್ದವರೂ ಸೇರಿದಂತೆ ವಿವಿಧ ನಿಬಂಧನೆ ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಐದು ದಿವಸದಲ್ಲಿ ರಾಜ್ಯದಲ್ಲಿ ಭರೋಬ್ಬರಿ ನಾಲ್ಕು ಕೋಟಿಗೂ ಹೆಚ್ಚು ಮೊತ್ತ ದಂಡದ ರೂಪದಲ್ಲಿ ವಸೂಲಿ ಮಾಡಿದ್ದಾರೆ.
ಪ್ರತಿದಿನ ಸರಾಸರಿ 15ರಿಂದ 20ಸಾವಿರ ಮಂದಿಯಿಂದ ಈ ದಂಡ ವಸೂಲಿ ಮಾಡಲಾಗಿದೆ. ಆಗಸ್ಟ್ 1ರಿಂದ 5ರ ವರೆಗೆ ಮಾಸ್ಕ್ ಧರಿಸದೆ ಸಾರ್ವಜನಿಕ ಸ್ಥಳದಲ್ಲಿ ಸುತ್ತಾಡುತ್ತಿದ್ದ 93750ಮಂದಿಯಿಂದ ದಂಡ ವಸೂಲಿ ಮಾಡಲಾಗಿರುವುದಾಗಿ ಪೊಲೀಸ್ ಲೆಕ್ಕಾಚಾರ ತಿಳಿಸುತ್ತದೆ. ಮಾಸ್ಕ್ ಧರಿಸದ, ಸಾಮಾಜಿಕ ಅಂತರ ಪಾಲಿಸದ ಪ್ರಕರಣಕ್ಕೆ ಸಂಬಂಧಿಸಿ ತಲಾ 500ರೂ.ನಂತೆ ವಸೂಲಿ ಮಾಡಲಾಗಿದೆ. ಜನವರಿಯಿಂದ ತೊಡಗಿ ಜೂನ್ ತಿಂಗಳವರೆಗೆ ಕೇರಳದಲ್ಲಿ 35.17ಕೋಟಿ ರೂ. ಮೊತ್ತ ದಂಡದ ರೂಪದಲ್ಲಿ ವಸೂಲಿ ಮಾಡಲಾಗಿದೆ. ಆಯಾ ಜಿಲ್ಲೆಯಲ್ಲಿ ಪ್ರತಿದಿನ ಸಂಗ್ರಹವಾಗುವ ದಂಡದ ಮೊತ್ತವನ್ನು ಆಯಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೇಲ್ನೋಟದಲ್ಲಿ ತಪಾಸಣೆ ನಡೆಸಿ, ಜಿಲ್ಲಾ ಖಜಾನೆಯಲ್ಲಿ ಪಾವತಿಸಲಾಗುತ್ತಿದೆ.