ನವದೆಹಲಿ: ಕೋವಿಡ್ ಎರಡನೇ ಅಲೆ ವೇಳೆ ಆಮ್ಲಜನಕದ ಕೊರತೆಯಿಂದಾಗಿ ಒಂದು ರಾಜ್ಯ ಮಾತ್ರ ಈವರೆಗೆ 'ಶಂಕಿತ' ಸಾವನ್ನು ವರದಿ ಮಾಡಿದೆ. ಸಂಸತ್ತಿನಲ್ಲಿ ಆಮ್ಲಜನಕದ ಕೊರತೆಯಿಂದ ಸಾವು ವಿಷಯ ಪ್ರಸ್ತಾಪಿಸಿದ ನಂತರ ಕೇಂದ್ರವು ಅಂತಹ ಸಾವು-ನೋವುಗಳ ಬಗ್ಗೆ ದತ್ತಾಂಶವನ್ನು ಕೇಳಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ಸಂಸತ್ತಿನಲ್ಲಿ ಪ್ರಶ್ನೆಯನ್ನು ಎತ್ತಿದ ಬಳಿಕ ರಾಜ್ಯಗಳಿಗೆ ಈ ಪ್ರಶ್ನೆಯನ್ನು ನಿರ್ದಿಷ್ಟವಾಗಿ ಕೇಳಲಾಯಿತು. ಅಲ್ಲದೆ ಆ ವರದಿಗಳ ಪ್ರಕಾರ ಕೇವಲ ಒಂದು ರಾಜ್ಯ ಮಾತ್ರ ಶಂಕಿತ ಸಾವನ್ನು ಉಲ್ಲೇಖಿಸಿದೆ. ಇನ್ನು ಆಮ್ಲಜನಕದ ಕೊರತೆಯಿಂದ ಸಾವು ಸಂಭವಿಸಿದೆ ಎಂದು ಯಾವ ರಾಜ್ಯವು ಇಲ್ಲಿಯವರೆಗೆ ಹೇಳಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಹೇಳಿದರು.
ಮೂಲಗಳ ಪ್ರಕಾರ, ಅರುಣಾಚಲ ಪ್ರದೇಶ, ಅಸ್ಸಾಂ, ಒಡಿಶಾ, ಉತ್ತರಾಖಂಡ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿಕ್ರಿಯಿಸಿವೆ.
ಪಂಜಾಬ್ ಮಾತ್ರ ಆಮ್ಲಜನಕದ ಕೊರತೆಯಿಂದ ನಾಲ್ವರು ಶಂಕಿತ ಸಾವನ್ನು ವರದಿ ಮಾಡಿದೆ ಎಂದು ಲವ್ ಅಗರವಾಲ್ ಹೇಳಿದರು.
ಕೊರೋನಾ ಎರಡನೇ ಅಲೆ ಸಮಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಮ್ಲಜನಕದ ಕೊರತೆಯಿಂದ ಯಾವುದೇ ಸಾವು ಸಂಭವಿಸಿಲ್ಲ ಎಂದು ಕೇಂದ್ರ ಸರ್ಕಾರ ಕಳೆದ ತಿಂಗಳು ಸಂಸತ್ತಿಗೆ ತಿಳಿಸಿದ್ದು ಇದರಿಂದ ಆಕ್ರೋಶಗೊಂಡ ವಿರೋಧ ಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದವು.