ನವದೆಹಲಿ: ದೇಶದಲ್ಲಿ ಅರ್ಧಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ಕೇರಳದಲ್ಲಿವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕೇಂದ್ರ ಸರ್ಕಾರದ ಪ್ರಕಾರ, ಕಳೆದ ಏಳು ದಿನಗಳಲ್ಲಿ ದೇಶದಲ್ಲಿ ದಾಖಲಾದ ಸರಾಸರಿ ಶೇಕಡಾ 51.51 ರಷ್ಟು ಕೋವಿಡ್ ಪ್ರಕರಣಗಳು ಕೇರಳದವು.
ನಿನ್ನೆ ದೇಶದಲ್ಲಿ 28,204 ಮಂದಿ ಜನರಿಗೆ ಕೋವಿಡ್ ದೃಢಪಟ್ಟಿತ್ತು. ಈ ಪೈಕಿ 13,049 ಪ್ರಕರಣಗಳು ಕೇರಳದಿಂದ ವರದಿಯಾದುದಾಗಿದೆ. ಭಾನುವಾರ ರಜಾದಿನವಾಗಿದ್ದರಿಂದ ತಪಾಸಣೆಯ ಸಂಖ್ಯೆ ಕಡಿಮೆಯಾಗಿತ್ತು. ಇದರಿಂದ ಕೋವಿಡ್ ಬಾಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ತಿಳಿಯಲಾಗಿದೆ.
ಕಳೆದ ಕೆಲವು ದಿನಗಳಲ್ಲಿ, ಕೇರಳದಲ್ಲಿ ಪ್ರತಿದಿನ 20,000 ಕ್ಕೂ ಹೆಚ್ಚು ಸೋಂಕಿತರು ವರದಿಯಾಗುತ್ತಿದ್ದಾರೆ. ಪರೀಕ್ಷಾ ಧನಾತ್ಮಕ ದರವು 13 ಶೇ. ಕ್ಕಿಂತ ಹೆಚ್ಚಿದೆ. ಇತ್ತೀಚೆಗೆ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನಕ್ಕೆ 30,000 ದಿಂದ 40,000 ದವರೆಗೆ ಇದೆ. ಇದರಲ್ಲಿ ಅರ್ಧದಷ್ಟು ಕೇರಳದ್ದು ಎಂದು ಕೇಂದ್ರ ಸರ್ಕಾರ ಬೊಟ್ಟುಮಾಡಿದೆ.
ರಾಜ್ಯದ ಕೋವಿಡ್ ಪರಿಸ್ಥಿತಿಯನ್ನು ನಿರ್ಣಯಿಸಲು ಬಂದ ಮೊದಲ ಕೇಂದ್ರ ತಂಡದ ವರದಿಯ ವಿವರಗಳನ್ನು ಬಿಡುಗಡೆ ಮಾಡಲಾಗಿದೆ. ಪತ್ತನಂತಿಟ್ಟ ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆ ತೀವ್ರವಾಗಿಲ್ಲ ಎಂಬ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಹೇಳಿಕೆಯನ್ನು ಕೇಂದ್ರ ತಿರಸ್ಕರಿಸಿದೆ. ಕೇಂದ್ರ ತಂಡವನ್ನು ಮುನ್ನಡೆಸಿದ ಎನ್‌ಸಿಡಿಸಿ ನಿರ್ದೇಶಕ ಡಾ ಎಸ್‌ಕೆ ಸಿಂಗ್ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಕೋವಿಡ್ ಪ್ರಕರಣಗಳು ಎರಡನೇ ಬಾರಿಗೆ ಪತ್ತನಂತಿಟ್ಟ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ ಎಂದು ಹೇಳಿದರು.