ನವದೆಹಲಿ: ಅಪ್ಘಾನಿಸ್ತಾನದ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸಿ ತಮ್ಮದೇ ಸರ್ಕಾರ ರಚಿಸುತ್ತಿರುವ ತಾಲಿಬಾನಿಗಳ ಜನ್ಮ ಜಾಲಾಡಿದಷ್ಟೂ ನಿಗೂಢ, ಅಚ್ಚರಿ ಎನಿಸುವ ವಿಷಯಗಳು ಹೊರಬರುತ್ತಲೇ ಇವೆ. ಆದರೆ ಇದೀಗ ಎಲ್ಲರಿಗೂ ಶಾಕಿಂಗ್ ಎನಿಸುವ ಸುದ್ದಿಯೊಂದು ಭಾರತೀಯ ಸೇನೆಯಿಂದ ಹೊರಬಂದಿದೆ.
ಅದೇನೆಂದರೆ ತಾಲಿಬಾನ್ ಉಗ್ರಸಂಘಟನೆಯನ್ನು ಮುನ್ನಡೆಸುತ್ತಿರುವ ರಾಜಕೀಯ ಘಟಕದ ಮುಖ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಭಾರತೀಯ ಸೇನೆಯಲ್ಲಿಯೇ ತರಬೇತಿ ಪಡೆದ್ದಾನೆ. 1982ರಲ್ಲಿ ಭಾರತೀಯ ಸೇನೆ ಆಫ್ಘಾನಿಸ್ತಾನದವರಿಗಾಗಿ ಬಾಗಿಲುಗಳನ್ನು ತೆರೆದಿಟ್ಟಾಗ ಸೇರ್ಪಡೆಯಾಗಿದ್ದು ಈ ಅಬ್ಬಾಸ್.
ಈ ಬಗ್ಗೆ ಭಾರತೀಯ ಸೇನೆಯೇ ಖಚಿತಪಡಿಸಿದೆ. ಆಫ್ಘಾನಿಸ್ತಾನಿಗಳ ಮೇಲೆ ದೌರ್ಜನ್ಯ ಎಸಗಿ ಇಡೀ ರಾಷ್ಟ್ರವನ್ನೇ ತಮ್ಮ ವಶಕ್ಕೆ ಪಡೆದುಕೊಂಡದ್ದು ಇದೇ ಅಬ್ಬಾಸ್ ನೇತೃತ್ವದಲ್ಲಿ! 1982ರಲ್ಲಿ 20 ವರ್ಷದವನಾಗಿದ್ದಾಗ ಭಾರತೀಯ ಸೇನೆಗೆ ಸೇರಿದ್ದ ಅಬ್ಬಾಸ್ ತುಂಬಾ ಒಳ್ಳೆಯವನಾಗಿದ್ದ, ಸ್ನೇಹಪರನಾಗಿದ್ದ ಎಂದು ಹಿರಿಯ ಸೇನಾಧಿಕಾರಿಗಳು ನೆನಪಿಸಿಕೊಳ್ಳುತ್ತಾರೆ. ಭಾರತೀಯ ಸೇನೆಯಲ್ಲಿ ಆತ ಕೆಲಸ ಮಾಡುವಾಗ ಸಹೋದ್ಯೋಗಿಗಳು ಆತನನ್ನು ಪ್ರೀತಿಯಿಂದ ಶೇರು ಎಂದು ಕರೆಯುತ್ತಿದ್ದರು. ಡೆಹರಾಡೂನ್‍ನ ತರಬೇತಿ ಕೇಂದ್ರದಲ್ಲಿ ಒಂದೂವರೆ ವರ್ಷ ಕಾಲ ತರಬೇತಿ ಪಡೆದಿದ್ದ. ನಂತರ ಇದೇ ಸೇನೆಯಲ್ಲಿ ಮೇಜರ್ ಜನರಲ್ ಆಗಿ ನಿವೃತ್ತನಾಗಿದ್ದ ಕೂಡ.
ನಿವೃತ್ತಿ ಸಮಯದಲ್ಲಿಯೂ ಅವರು ಉತ್ತಮ ವ್ಯಕ್ತಿಯಾಗಿದ್ದರು. ಈಜು ಸೇರಿದಂತೆ ಹಲವಾರು ಕ್ರೀಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿಸುತ್ತಿದ್ದರು.ತುಂಬಾ ಒಳ್ಳೆಯವರಾಗಿದ್ದರು ಶೇರು. ಈ ರೀತಿಯ ಯಾವುದೇ ಕ್ರೌರ್ಯ ಸ್ವಭಾವ ಅವರಲ್ಲಿ ಇರಲಿಲ್ಲ ಎಂದು ನೆನಪಿಸಿಕೊಳ್ಳುತ್ತಾರೆ ಭಾರತೀಯ ಸೇನೆಯ ನಿವೃತ್ತ ಮೇಜರ್ ಜನರಲ್ ಡಿ.ಎ.ಚತುರ್ವೇದಿ. ಭಾರತೀಯ ಸೇನೆ ಸೇರಿದ ಬಳಿಕ ಶೇರು ಆಫ್ಘಾನ್ ರಾಷ್ಟ್ರೀಯ ಸೇನೆಯ ಲೆಫ್ಟಿನೆಂಟ್ ಆಗಿ ಸೇರಿಕೊಂಡಿದ್ದರು. ಸೋವಿಯತ್ ಆಫ್ಘನ್ ಮಹಾಯುದ್ಧ, ಇಸ್ಲಾಮಿಕ್ ಲಿಬರೇಷನ್ ಆಫ್ ಆಫ್ಘಾನಿಸ್ತಾನ್ ಯುದ್ಧಗಳಲ್ಲಿ ಹೋರಾಟ ಮಾಡಿದ್ದರು ಎಂದು ಅವರು ಹೇಳುತ್ತಾರೆ.
ನನ್ನ ಬಳಿ ಈಗಲೂ ಆತನೊಂದಿಗಿನ ಫೋಟೋಗಳಿವೆ. ನೀರಿನಲ್ಲಿ ಮೀನಿಗಿಂತಲೂ ವೇಗವಾಗಿ ಈಜುತ್ತಿದ್ದ. ಉತ್ತಮ ಸ್ನೇಹಿತನಾಗಿದ್ದ ಎನ್ನುತ್ತಾರೆ ಮತ್ತೊಬ್ಬ ಸೇನಾಧಿಕಾರಿ ಖೇಹರ್‍ಸಿಂಗ್ ಶೇಖಾವತ್.
ಈ ಹಿಂದಿನ ತಾಲಿಬಾನ್ ಸರ್ಕಾರದಲ್ಲಿ ವಿದೇಶಾಂಗ ವ್ಯವಹಾರಗಳ ಉಪಮಂತ್ರಿಯಾಗಿ ಕೆಲಸ ಮಾಡಿದ್ದ ಅಬ್ಬಾಸ್. ಬಿಲ್‍ಕ್ಲಿಂಟನ್ ಅಮೆರಿಕ ಅಧ್ಯಕ್ಷರಾಗಿದ್ದಾಗ ಅಲ್ಲಿಗೆ ತೆರಳಿ ಮಾತುಕತೆ ನಡೆಸಿದ್ದ. ತಾಲಿಬಾನ್‍ನ ಮುಖ್ಯಸ್ಥನಾಗಿ ನೇಮಕವಾದ ನಂತರ ಉಗ್ರವಾದವನ್ನು ಅಳವಡಿಸಿಕೊಂಡು ಈಗ ಬಂಡುಕೋರರ ಗುಂಪಿನ ನಾಯಕರಾಗಿದ್ದಾನೆ ಎಂದು ತಿಳಿದುಬಂದಿದೆ.