ನವದೆಹಲಿ: ಪೆಗಾಸಸ್ ಗೂಢಚರ್ಯೆ ಹಗರಣ ಕುರಿತು ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವಿನ ಬಿಕ್ಕಟ್ಟು ಶಮನವಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇಷ್ಟೂ ದಿನ ಸಂಸತ್ತಿನಲ್ಲಿ ತೀವ್ರ ಗದ್ದಲ ಸೃಷ್ಟಿಸಿದ್ದ ವಿರೋಧ ಪಕ್ಷಗಳು ಇದೀಗ ಸುಪ್ರೀಂಕೋರ್ಟ್ ನಲ್ಲಿ ದನಿ ಎತ್ತಲು ನಿರ್ಧರಿಸಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪೆಗಾಗಸ್ ವಿವಾರ ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರವಾಗಿದೆ. ಈ ವಿಚಾರ ಸಂಬಂಧ ನ್ಯಾಯಯುತ ತನಿಖೆ ನಡೆಯುವ ಅಗತ್ಯವಿದ್ದು, ಹೀಗಾಗಿ ವಿರೋಧ ಪಕ್ಷಗಳು ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಿವೆ ಎಂದು ಮೂಲಗಳು ತಿಳಿಸಿವೆ.
ನಿನ್ನೆಯಷ್ಟೇ ಹೇಳಿಕೆ ನೀಡಿದ್ದ ಕೇಂದ್ರ ಸರ್ಕಾರ ಪೆಗಾಸಸ್ ವಿವಾದ ಸಂಬಂಧ ವಿರೋಧ ಪಕ್ಷಗಳು ಪದೇ ಪದೇ ಸಂಸತ್ತು ಕಲಾಪಕ್ಕೆ ಅಡ್ಡಿಯುಂಟು ಮಾಡಿದ್ದರಿಂದ ರೂ.130 ಕೋಟಿಗೂ ಹೆಚ್ಚು ತೆರಿಗೆದಾರರ ಹಣ ವ್ಯರ್ಥವಾಗಿದೆ ಎಂದು ಹೇಳಿತ್ತು.
ಇದರ ಬೆನ್ನಲ್ಲೇ ಇದೀಗ ತಮ್ಮ ದಿಕ್ಕನ್ನು ಬದಲಿಸಿರುವ ವಿರೋಧ ಪಕ್ಷಗಳು ಸಂಸತ್ತು ಬದಲು ಸುಪ್ರೀಂಕೋರ್ಟ್ ನಲ್ಲಿ ದನಿ ಎತ್ತಲು ನಿರ್ಧರಿಸಿವೆ ಎಂದು ವರದಿಗಳು ತಿಳಿಸಿವೆ.
ಇದರಂತೆ ಮುಂದಿನ ವಾರದಿಂದ ವಿರೋಧ ಪಕ್ಷಗಳ ನಾಯಕರು ಸಂಸತ್ತಿನಲ್ಲಿ ತೈಲ ಬೆಲೆ ಏರಿಕೆ, ನಿರುದ್ಯೋಗ ಹಾಗೂ ಕೋವಿಡ್ ನಿರ್ವಹಣೆಯಲ್ಲಿ ವಿಫಲಗೊಂಡಿರುವ ವಿಚಾರ ಕುರಿತು ಧ್ವನಿ ಎತ್ತಲಿದ್ದಾರೆಂದು ಮೂಲಗಳು ಮಾಹಿತಿ ನೀಡಿದೆ.