ಕಾಬೂಲ್ : ಜಮ್ಮು ಕಾಶ್ಮೀರದಲ್ಲಿ ಶಾಂತಿ ಕದಡುವ ಹಾಗೂ ಉಗ್ರ ಚಟುವಟಿಕೆಗಳಿಗೆ ಹುರಿದುಂಬಿಸುವ ಮತ್ತು ಬೆಂಬಲಿಸುವಂತೆ ಜೈಶ್ ಇ- ಮೊಹಮ್ಮದ್ ಸಂಘಟನೆಯು ತಾಲಿಬಾನ್ ನೆರವು ಕೋರಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನಗರದ ಮೇಲೆ ತಾಲಿಬಾನ್ ಹಿಡಿತ ಸಾಧಿಸಿದ ಎರಡನೇ ವಾರದಲ್ಲೇ ಜೈಶ್ ಇ- ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ ತಾಲಿಬಾನ್ ಉಗ್ರರನ್ನು ಭೇಟಿ ಮಾಡಿದ್ದರು ಎಂಬ ಆಘಾತಕಾರಿ ಸುದ್ದಿ ಹೊರ ಬಿದ್ದಿದೆ.
ತಾಲಿಬಾನ್ ರಾಜಕೀಯ ಮುಖಂಡ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅನ್ನು ಭೇಟಿ ಮಾಡಿದ ಜೈಶ್ ಇ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಕಾಶ್ಮೀರ ಕಣಿವೆಯಲ್ಲಿ ತಾವು ನಡೆಸುತ್ತಿರುವ ಕಾರ್ಯಾಚರಣೆಗಳಿಗೆ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗಿದೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಸಾಧಿಸಿದ ವಿಜಯದ ಬಗ್ಗೆ ಮಸೂದ್ ಅಜರ್ ಸಂತಸ ವ್ಯಕ್ತಪಡಿಸಿದ್ದರು. ಆಗಸ್ಟ್ 16ರಂದು "ಮಂಜಿಲ್ ಕಿ ತರಫ್" (ಗಮ್ಯದ ಕಡೆಗೆ) ಎಂಬ ಶೀರ್ಷಿಕೆಯಲ್ಲಿ ಜೆಇಎಂ ಮುಖ್ಯಸ್ಥರು ಅಫ್ಘಾನಿಸ್ತಾನದಲ್ಲಿ "ಮುಜಾಹಿದ್ದೀನ್ ನ ಯಶಸ್ಸನ್ನು" ಶ್ಲಾಘಿಸಿದ್ದರು. ಪಾಕಿಸ್ತಾನದ ಬಹವಾಲ್ಪುರದ ಮರ್ಕಜ್ (ಪ್ರಧಾನ ಕಛೇರಿಯ) ನಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರರು ಈ ಸಂದೇಶವ್ನು ಹಂಚಿಕೊಳ್ಳುತ್ತಾ, ತಾಲಿಬಾನ್ ಗೆಲುವಿನ ಬಗ್ಗೆ ಪರಸ್ಪರ ಶುಭಾಶಯ ಹಂಚಿಕೊಂಡಿದ್ದರು.
ಜಮ್ಮು ಕಾಶ್ಮೀರದಲ್ಲಿ ಜೈಶ್ ಉಗ್ರ ಚಟುವಟಿಕೆ:
ಭಾರತದ ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಜೈಶ್ -ಇ ಮೊಹಮ್ಮದ್ ಸಂಘಟನೆಯು 1999ರಿಂದಲೂ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ತಾಲಿಬಾನ್ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳು ಸುನ್ನಿ ಇಸ್ಲಾಂನ ದೇವಬಂಧಿ ಶಾಲೆಯಲ್ಲಿ ಷರಿಯಾ ಕಾನೂನಿನ ಬಗ್ಗೆ ಅರ್ಥೈಸಿಕೊಳ್ಳುವಲ್ಲಿ ಒಂದೇ ಸೈದ್ಧಾಂತಿಕ ನಿಲುವುಗಳನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ.
ಪಾಕಿಸ್ತಾನದ ಭಯೋತ್ಪಾದಕರು ಅಪಹರಿಸಿದ್ದ ಇಂಡಿಯನ್ ಏರ್ ಲೈನ್ಸ್ ವಿಮಾನ ಐಸಿ 814 ರಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಭಾರತೀಯ ಜೈಲಿನಿಂದ ಜೈಶ್ ಇ ಮೊಹಮ್ಮದ್ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಅನ್ನು ಬಿಡುಗಡೆ ಮಾಡಲಾಗಿತ್ತು.
ಕಠ್ಮಂಡುವಿನಿಂದ ಲಕ್ನೋಗೆ ಪ್ರಯಾಣಿಸುತ್ತಿದ್ದ ವಿಮಾನವನ್ನು ಅಂದು ಉಗ್ರರು ಅಪಹರಿಸಿದ್ದರು. ನಂತರ ವಿಮಾನವನ್ನು ಅಫ್ಘಾನಿಸ್ತಾನದ ಕಂದಹಾರ್‌ಗೆ ಕರೆದೊಯ್ಯಲಾಯಿತು, ಅಲ್ಲಿ ತಾಲಿಬಾನ್‌ಗಳು ಅಧಿಕಾರದಲ್ಲಿದ್ದರು. ಅಪಹರಿಸಲ್ಪಟ್ಟ ವಿಮಾನವು ಕಂದಹಾರ್‌ನಲ್ಲಿ ಬಂದಿಳಿದ ಕೂಡಲೇ, ತಾಲಿಬಾನ್‌ಗಳು ಏರ್‌ಬಸ್‌ನ ಸುತ್ತಲೂ ಒಂದು ವೃತ್ತವನ್ನು ರಚಿಸಿ, ಮಸೂದ್ ಅಜರ್ ಸೇರಿದಂತೆ ಭಯೋತ್ಪಾದಕರನ್ನು ಭಾರತ ಸರ್ಕಾರ ಬಿಡುಗಡೆ ಮಾಡುವವರೆಗೂ ಅವರು ತಮ್ಮ ನಿಯಂತ್ರಣದಲ್ಲಿ ಇರುತ್ತಾರೆ ಎಂದು ಹೇಳಿದರು.
ಹಳೆಯ ನಂಟಿಗೆ ಹೊಸ ರೂಪ ನೀಡುವ ಆತಂಕ:
ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ಗಳು ಮತ್ತೆ ಚುಕ್ಕಾಣಿ ಹಿಡಿದಿರುವುದು ಜೈಶ್-ಎ-ಮೊಹಮ್ಮದ್ ಜೊತೆಗಿನ ಹಿಂದಿನ ನಂಟು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಬಹುದು ಎಂಬ ಶಂಕೆಯಿದೆ. ಆದಾಗ್ಯೂ, ತಾಲಿಬಾನ್ ಇತ್ತೀಚೆಗೆ ಅಫ್ಘಾನ್ ಪ್ರದೇಶವನ್ನು ಯಾವುದೇ ದೇಶದ ವಿರುದ್ಧದ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಲು ಅನುಮತಿಸುವುದಿಲ್ಲ ಎಂದು ಹೇಳಿದೆ.
ಅಫ್ಘಾನಿಸ್ತಾನ ಹೇಗಿತ್ತು, ಹೇಗಾಯ್ತು?
ಎರಡು ದಶಕಗಳ ಕಾಲ ಯುನೈಟೆಡ್ ಸ್ಟೇಟ್ಸ್ ಸೇನೆ ಭದ್ರತೆ ನಡುವೆ ಸುಭದ್ರವಾಗಿದ್ದ ಅಫ್ಘಾನಿಸ್ತಾನವನ್ನು ತಾಲಿಬಾನ್ ಕೇವಲ 10 ದಿನಗಳಲ್ಲೇ ಸಂಪೂರ್ಣ ಕೈವಶ ಮಾಡಿಕೊಂಡಿತು. ಅದಾಗಿ 10 ದಿನದಲ್ಲಿ ಇಡೀ ದೇಶದ ಸಂಪೂರ್ಣ ಚಿತ್ರಣವೇ ಬದಲಾಯಿತು. ಆಗಸ್ಟ್ 15ರಂದು ರಾಜಧಾನಿ ಕಾಬೂಲ್‌ಗೆ ಲಗ್ಗೆ ಇಡುವ ಮೂಲಕ ಇಡೀ ದೇಶವನ್ನು ಹಿಡಿತಕ್ಕೆ ತೆಗೆದುಕೊಂಡ ತಾಲಿಬಾನಿಗಳು ತಮ್ಮ ಕ್ರೌರ್ಯ ಪ್ರದರ್ಶಿಸಲು ಶುರು ಮಾಡಿದರು. ತಾಲಿಬಾನ್ ಉಗ್ರರ ಮುಷ್ಠಿಯಲ್ಲಿ ಸಿಲುಕಿದ ಪ್ರಜೆಗಳು ಪ್ರತಿನಿತ್ಯ ಭಯದ ನೆರಳಿನಲ್ಲೇ ಬದುಕುತ್ತಿದ್ದು, ದೇಶ ತೊರೆಯಲು ಹವಣಿಸುತ್ತಿದ್ದಾರೆ. ಇದಕ್ಕೂ ಮೊದಲು 1996 ರಿಂದ 2001ರವರೆಗೂ ಅಫ್ಘಾನಿಸ್ತಾನದಲ್ಲಿ ಇದೇ ತಾಲಿಬಾನ್ ಉಗ್ರ ಸಂಘಟನೆಯ ಹಿಡಿತದಲ್ಲಿತ್ತು. 2001ರ ಸಪ್ಟೆಂಬರ್ 11ರಂದು ಯುನೈಟೆಡ್ ಸ್ಟೇಟ್ಸ್ ಮೇಲೆ ಅಲ್ ಖೈದಾ ಉಗ್ರರು ದಾಳಿ ನಡೆಸಿದ್ದರು. ಅಲ್ ಖೈದಾ ಜೊತೆ ಆತ್ಮೀಯವಾಗಿ ಗುರುತಿಸಿಕೊಂಡಿದ್ದ ಕಾರಣಕ್ಕಾಗಿ ತಾಲಿಬಾನ್ ಮೇಲೂ ಯುಎಸ್ ಸೇನಾಪಡೆ ಕಾರ್ಯಾಚರಣೆಗೆ ಇಳಿಯಿತು. ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಫ್ಘಾನ್ ಮೇಲೆ ದಾಳಿ ನಡೆಸಿದ ಯುಎಸ್ ಸೇನೆಯು ಅಫ್ಘಾನಿಸ್ತಾನವನ್ನು 2001ರಲ್ಲಿ ತಾಲಿಬಾನ್ ಹಿಡಿತದಿಂದ ಬಿಡುಗಡೆಗೊಳಿಸಿತು. ಅದರ ಪರಿಣಾಮವಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ಕಳೆದುಕೊಂಡಿತು. ಯುಎಸ್ ಬೆಂಬಲಿತ ಸರ್ಕಾರವು ಅಸ್ತಿತ್ವಕ್ಕೆ ಬಂದಿತ್ತು.