ನವದೆಹಲಿ: ಮದುವೆಗೆ ಅಥವಾ ರಿಸೆಪ್ಷನ್‌ಗೆ ಬಂದೇ ಬರ್ತೇನೆ ಎಂದು ಆಶ್ವಾಸನೆ ಕೊಟ್ಟು ನಂತರ ಹೋಗಲು ಆಗದ ಘಟನೆಗಳು ನಡೆದೇ ಇರುತ್ತವೆ. ಕೆಲವೊಮ್ಮೆ ಕಟ್ಟುಪಾಡಿಗೆ ಬಿದ್ದು, ಬರುತ್ತೇವೆ ಎಂದು ಸುಳ್ಳು ಹೇಳಿದರೆ, ಇನ್ನು ಕೆಲವೊಮ್ಮೆ ಯಾವುದೋ ಕಾರಣಕ್ಕೆ ಹೋಗಲು ಸಾಧ್ಯವಾಗುವುದಿಲ್ಲ.
ಹೀಗೇ ಒಂದು ಘಟನೆಯಲ್ಲಿ ಪರಿಚಯಸ್ಥರೊಬ್ಬರ ಮದುವೆಗೆ ಬಂದೇ ಬರುತ್ತೇನೆ ಎಂದು ವಾಗ್ದಾನ ಮಾಡಿ ಕೊನೆಗೆ ಮದುವೆಗೆ ಹೋಗದ ವ್ಯಕ್ತಿಯೊಬ್ಬನಿಗೆ ಮನೆಗೇ ಮದುವೆಯ ಊಟದ ಬಿಲ್ ಬಂದಿದ್ದು, ಆ ಬಿಲ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮದುವೆಯ ದಿನ ಏರ್ಪಡಿಸಿದ್ದ ಡಿನ್ನರ್ ಪಾರ್ಟಿಗೆ ವ್ಯಕ್ತಿಯೊಬ್ಬ ತನ್ನ ಪತ್ನಿಯ ಸಹಿತ ಬಂದೇ ಬರುವುದಾಗಿ ಹೇಳಿದ್ದ. ಕರೊನಾ ಹಿನ್ನೆಲೆಯಲ್ಲಿ ಎಷ್ಟು ಮಂದಿ ಬರುತ್ತಾರೆಯೋ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಆ ವ್ಯಕ್ತಿಗೆ ಹೋಗಲು ಸಾಧ್ಯವಾಗಿರಲಿಲ್ಲ. ನಂತರ ಮದುಮಗಳು ಈ ವ್ಯಕ್ತಿಗೆ ಆತನ ಹಾಗೂ ಆತನ ಪತ್ನಿಯ ಪಾಲಿನ ಭೋಜನಕ್ಕೆ ಆಗುವ ಖರ್ಚನ್ನು ಕಟ್ಟಿಕೊಡುವಂತೆ ಕೋರಿ $240 (ಸುಮಾರು 17,700 ರೂಪಾಯಿ) ಬಿಲ್ ಒಂದನ್ನು ಕಳುಹಿಸಿಕೊಟ್ಟಿದ್ದಾಳೆ. . ತಲಾ $120ರಂತೆ ಇಬ್ಬರಿಗೆ ಡಿನ್ನರ್ ವ್ಯವಸ್ಥೆಗೆ ಇಷ್ಟು ಖರ್ಚಾಗಿದೆ ಎಂದು ಇನ್‌ವಾಯ್ಸ್‌ನಲ್ಲಿ ಕಾಣಬಹುದಾಗಿದೆ.
'ನೀವು ಬರುತ್ತೇವೆ ಎಂದು ಹೇಳಿದ ಕಾರಣದಿಂದ ನಿಮ್ಮ ಸೀಟುಗಳನ್ನು ಬುಕ್ ಮಾಡಲಾಗಿತ್ತು. ನೀವು ಬರುವುದಿಲ್ಲ ಎಂದು ನಮಗೆ ಮೊದಲೇ ಫೋನ್ ಮಾಡಿ ತಿಳಿಸಲಿಲ್ಲ. ಆದ್ದರಿಂದ ನಿಮ್ಮ ಬಿಲ್ ನಾವು ಪಾವತಿಸಲು ಸಾಧ್ಯವಾಗವುದಿಲ್ಲ. ನೀವೇ ಅದನ್ನು ಪಾವತಿಸಬೇಕಿದೆ' ಎಂದು ಅದರಲ್ಲಿ ಬರೆಯಲಾಗಿದೆ. 'ನೀವು ಪೇಪಾಲ್ ಅಥವಾ ಜೆಲ್ಲೆ ಆಯಪ್ ಮೂಲಕ ಪಾವತಿ ಮಾಡಬಹುದು. ಹೇಗೆ ಪಾವತಿ ಮಾಡಲು ಇಚ್ಚಿಸುವಿರಿ ಎಂದು ಮೊದಲೇ ನಮಗೆ ತಿಳಿಸಿದರೆ ಅದನ್ನು ನೋಡಲು ಅನುಕೂಲ ಆಗುತ್ತದೆ' ಎಂದು ಬಿಲ್ ಜತೆಗಿರುವ ಚೀಟಿಯಲ್ಲಿ ಬರೆಯಲಾಗಿದ್ದು, ಅದೀಗ ವೈರಲ್ ಆಗಿದೆ.