ಡೆಹ್ರಾಡೂನ್: 'ಹಿಂದೂ ಪದವನ್ನು ಹೈಜಾಕ್ ಮಾಡಲು ಬಿಜೆಪಿಗೆ ನಾನು ಅವಕಾಶ ನೀಡುವುದಿಲ್ಲ' ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಹರೀಶ್ ರಾವತ್ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರು 'ಹಿಂದೂಯಿಸಂ'ನಿಂದ ಬಹುದೂರ ಸಾಗಿದ್ದು, ಈಗ 'ಹಿಂದುತ್ವ'ಕ್ಕೆ ಅಂಟಿಕೊಂಡಿದ್ದಾರೆ' ಎಂದರು.
'ನಮಗೆ ಸನಾತನ ಧರ್ಮದಲ್ಲಿ ನಂಬಿಕೆ ಇದೆ. ನಾವು ಸಹ ಹಿಂದೂ ಮೌಲ್ಯಗಳನ್ನೇ ಅಳವಡಿಸಿಕೊಂಡಿದ್ದೇವೆ. ಹೀಗಾಗಿ ಹಿಂದೂ ಪದವನ್ನು ಹೈಜಾಕ್ ಮಾಡಲು ಬಿಜೆಪಿ ಅವಕಾಶ ನೀಡುವುದಿಲ್ಲ' ಎಂದು ಪುನರುಚ್ಚರಿಸಿದರು.
'ಹಿಂದೂಗಳಾಗಿ ನಮಗೆ ವಸುಧೈವ ಕುಟುಂಬಕಂ, ಸರ್ವ ಧರ್ಮ ಸಮಭಾವ ಎಂಬ ಮಾತುಗಳಲ್ಲಿ ನಂಬಿಕೆ ಇದೆ. ಆದರೆ ಬಿಜೆಪಿಗೆ 'ಸರ್ವ ಧರ್ಮ ಜಗಡಾಭವ' (ಎಲ್ಲ ಧರ್ಮಗಳೊಂದಿಗೆ ಜಗಳ ಮಾಡುವುದು) ಎಂಬ ಮಾತಿನಲ್ಲಿ ನಂಬಿಕೆ ಹೆಚ್ಚು' ಎಂದು ಟೀಕಿಸಿದರು.
'ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರಗಳ ವೈಫಲ್ಯಗಳನ್ನು ಜನರಿಗೆ ತಿಳಿಸುವ ಸಲುವಾಗಿ ಪಕ್ಷವು ಮುಂದಿನ ತಿಂಗಳು ಪರಿವರ್ತನಾ ಯಾತ್ರೆ ಆರಂಭಿಸಲಿದೆ. ಉತ್ತರಾಖಂಡದ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಪಾಡುವ ಸಲುವಾಗಿ ಸರ್ಕಾರವನ್ನು ಬದಲಿಸಬೇಕಾದ ಅಗತ್ಯ ಇದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿ ಕೊಡಲಾಗುವುದು' ಎಂದು ಹೇಳಿದರು.