ನವದೆಹಲಿ: ಪೆಗಾಸಸ್ ವಿವಾದಕ್ಕೆ ಸಂಬಂಧಿಸಿದಂತೆ ಮಾಹಿತಿ ಬಹಿರಂಗಕ್ಕೆ ಕೋರಿ ಐವರು ಪತ್ರಕರ್ತರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ.
ಪೆಗಾಸ್ ತಂತ್ರಾಂಶದಿಂದ ಗೂಢಾಚಾರಿಕೆಗೆ ಒಳಗಾಗಿದ್ದಾರೆ ಎನ್ನಲಾದ ಪರಂಜಾಯ್ ಗುಹಾ, ಎಸ್‌ಎನ್‌ಎಂ ಆಬ್ಡಿ, ಪ್ರೇಂ ಶಂಕರ್ ಜಾ, ರೂಪೇಶ್ ಕುಮಾರ್ ಸಿಂಗ್, ಇಪ್ಸಾ ಶತಾಕ್ಷಿ ಇವರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಐವರು ಪತ್ರಕರ್ತರಾಗಿದ್ದಾರೆ.
ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಬಿಡುಗಡೆ ಮಾಡಿರುವ ವರದಿ ಪ್ರಕಾರ ಈ ಐವರು ಪತ್ರಕರ್ತರ ಮೊಬೈಲ್‌ಗಳನ್ನು ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ಮಾಡಲಾಗಿತ್ತು. ಈ ಅರ್ಜಿದಾರರ ಪ್ರಕಾರ ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಅವರ ಮೊಬೈಲ್‌ನ್ನು ಫಾರೆನ್ಸಿಕ್ ಪರೀಕ್ಷೆಯನ್ನು ನಡೆಸಿದೆ. ಪೆಗಾಸಸ್ ತಂತ್ರಾಂಶ ಬಳಸಿರುವುದು ಬಹಿರಂಗವಾಗಿದೆ.
ನಮ್ಮ ಮೊಬೈಲ್‌ನ್ನು ಸರ್ಕಾರ ಅಥವಾ ಮೂರನೇ ವ್ಯಕ್ತಿಯು ಪೆಗಾಸಸ್ ಮೂಲಕ ಬೇಹುಗಾರಿಕೆ ಮಾಡಿರುವ ಸಾಧ್ಯತೆ, ಇದನ್ನು ಅಲ್ಲಗಳೆದಿರುವ ಕೇಂದ್ರ ಸರ್ಕಾರ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ ಎಂದು ಹೇಳಿದ್ದಾರೆ.
ಸರ್ಕಾರದ ಇಂತಹ ಪ್ರಯತ್ನದಿಂದ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗುತ್ತದೆ. ಅದಲ್ಲದೆ ಮೂಲಭೂತ ಹಕ್ಕಾದ ಖಾಸಗಿತನಕ್ಕೂ ಧಕ್ಕೆಯಾಗುತ್ತದೆ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಪೆಗಾಸಸ್ ಸ್ಪೈವೇರ್ ಬಳಕೆಯನ್ನು ಬಹಿರಂಗಪಡಿಸುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ. ಐದು ಪತ್ರಕರ್ತರು ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿಯನ್ನು ಸಲ್ಲಿಕೆ ಮಾಡಿದ್ದು, ಸರ್ಕಾರಿ ಏಜೆನ್ಸಿಗಳು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಹೇಳಿದೆ.
ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎನ್.ರಾಮ್ ಮತ್ತು ಶಶಿ ಕುಮಾರ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ ಆಗಸ್ಟ್ 5 ರಂದು ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ.
ಈ ಅರ್ಜಿಯ ವಿಚಾರವನ್ನು ನಿನ್ನೆ ಹಿರಿಯ ವಕೀಲ ಕಪಿಲ್ ಸಿಬಲ್ ಅವರು. ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ ಪೀಠದ ಮುಂದೆ ಮಂಡಿಸಿದ್ದರು. ನಾಗರಿಕರು, ರಾಜಕಾರಣಿಗಳು, ವಿರೋಧ ಪಕ್ಷಗಳ ನಾಯಕರು, ಪತ್ರಕರ್ತರು ಮತ್ತು ನ್ಯಾಯಾಲಯದ ಸಿಬ್ಬಂದಿಯನ್ನು ಗೂಢಚರ್ಯೆಗೆ ಗುರಿ ಮಾಡಲಾಗಿದೆ. ಈ ವಿಚಾರ ದೇಶ ದಾದ್ಯಂತ, ವಿಶ್ವದಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಹೀಗಾಗಿ ಈ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಎತ್ತಿಕೊಳ್ಳಬೇಕು' ಎಂದು ಪ್ರತಿಪಾದಿಸಿದ್ದರು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ಮತ್ತು ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠ ಗುರುವಾರ (ಆ.5) ವಿಚಾರಣೆ ನಡೆಸಲಿದೆ ಎಂದು ತಿಳಿದುಬಂದಿದೆ. ಪೆಗಾಸಸ್ ಗೂಢಚರ್ಯೆಯನ್ನು ಸುಪ್ರೀಂ ಕೋರ್ಟ್‌ನ ಹಾಲಿ ಅಥವಾ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಸ್ವತಂತ್ರ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು ಎಂದು ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್, ಕಮ್ಯುನಿಸ್ಟ್ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾದ ರಾಜ್ಯಸಭಾ ಸಂಸದ ಜಾನ್ ಬ್ರಿಟಾಸ್ ಮತ್ತು ವಕೀಲ ಎಂಎಲ್ ಶರ್ಮಾ ಅವರು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ತುರ್ತು ವಿಚಾರಣೆ ಕೋರಿಕೆ ಪಟ್ಟಿಗೆ ಸೇರಿಸಲು ನ್ಯಾಯಾಲಯದ ಸಿಬ್ಬಂದಿ ಸಿದ್ಧರಿರಲಿಲ್ಲ' ಎಂದು ಮತ್ತೊಬ್ಬ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಪೀಠದ ಮುಂದೆ ಹೇಳಿದರು. ಅರ್ಜಿದಾರರ ಪರ ವಕೀಲರ ಪ್ರತಿಪಾದನೆಯನ್ನು ಆಲಿಸಿದ ಪೀಠವು ಆಗಸ್ಟ್ 5 ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ ಎಂದು ತಿಳಿದುಬಂದಿದೆ.
ಪೆಗಾಸಸ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ, ಮಾರಾಟ ಮಾಡಿರುವ ಎನ್‌ಎಸ್‌ಒ ಗ್ರೂಪ್ ಕಂಪನಿಯ ವಿರುದ್ಧ ಆದೇಶಿಸಲಾಗಿದ್ದ, ತನಿಖೆಗೆ ಇಸ್ರೇಲ್‌ನ ತನಿಖಾ ಸಂಸ್ಥೆಗಳು ಚಾಲನೆ ನೀಡಿವೆ.
ಬೇಹುಗಾರಿಕೆ ತಂತ್ರಾಂಶ ಮಾರಾಟಕ್ಕೆ ನೀಡಲಾಗಿದ್ದ ಅನುಮತಿ ಮತ್ತು ಸೂಚಿಸಲಾಗಿದ್ದ ಷರತ್ತುಗಳನ್ನು ಎನ್‌ಎಸ್‌ಒ ಗ್ರೂಪ್ ಉಲ್ಲಂಘಿಸಿದೆಯೇ ಎಂಬುದನ್ನು ಪರಿಶೀಲಿಸಲಾಗಿದೆ.
ಪೆಗಾಸಸ್ ಗೂಢಚಾರಿಕೆ ಬಗ್ಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸೇರಿದಂತೆ ಮಮತಾ ಬ್ಯಾನರ್ಜಿ ಮತ್ತಿತರ ರಾಜಕೀಯ ನಾಯಕರು ಒತ್ತಾಯಿಸಿದ್ದರು.
ಲೋಕಸಭೆ ಮತ್ತು ರಾಜ್ಯಸಭೆ ಅಧಿವೇಶನದಲ್ಲೂ ಪೆಗಾಸಸ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದರಿಂದ ಕಲಾಪ ಆರಂಭವಾದ ಒಂದು ವಾರವಿಡೀ ಅಧಿವೇಶನವನ್ನು ಮುಂದೂಡಬೇಕಾದ ಪರಿಸ್ಥಿತಿ ಎದುರಾಗಿತ್ತು.
ಪೆಗಾಸಸ್ ಬೇಹುಗಾರಿಕೆ ಬಗ್ಗೆ ಮಾಹಿತಿ:2019ರಲ್ಲಿ ಸುಮಾರು 20 ದೇಶಗಳಲ್ಲಿ 1400 ಪೆಗಾಸಸ್ ವಾಟ್ಸಾಪ್, ಫೇಸ್‌ಬುಕ್ ಮೆಸೆಜಿಂಗ್ ಸರ್ವೀಸ್‌ನ ಖಾತೆಗಳನ್ನು ಹ್ಯಾಕ್ ಮಾಡಲಾಗಿತ್ತು, ಅದರಲ್ಲಿ ಭಾರತೀಯ ಪತ್ರಕರ್ತರು ಹಾಗೂ ಕಾರ್ಯಕರ್ತರು ಕೂಡ ಇದ್ದರು.
ಹಲವು ದಿನಗಳ ಬಳಿಕ ಆವಿಷ್ಕಾರದ ನಂತ ಆಪಲ್ ಕಂಪನಿ ತನ್ನ ಐಒಎಸ್‌ನ ನಬವೀಕರಣದ ಆವೃತ್ತಿಯನ್ನು ಬಿಡುಗಡೆ ಮಾಡಲಾಗಿತ್ತು.ಪೆಗಾಸಸ್ ಸೃಷ್ಟಿ ಮಾಡಿರುವ ಕುರಿತು ಎನ್‌ಎಸ್‌ಒ ಗ್ರೂಪ್ ವಿರುದ್ಧ ಫೇಸ್‌ಬುಕ್ 2019ರಲ್ಲಿ ದೂರು ನೀಡಿತ್ತು.
ಪೆಗಾಸಸ್ ಬೇಹುಗಾರಿಕಾ ಸಾಫ್ಟ್‌ವೇರ್‌ನ್ನು ಇಸ್ರೇಲ್ ಕಂಪನಿ ಎನ್‌ಎಸ್ ಒ ಅಭಿವೃದ್ಧಿಪಡಿಸಿದೆ. ಸೈಬರ್ ಶಸ್ತ್ರಾಸ್ತ್ರ ತಯಾರಿಸುವಲ್ಲಿ ಈ ಕಂಪನಿ ಮುಂದಿದೆ. ಇದಕ್ಕೆ ದಿ ಪೆಗಾಸಸ್ ಪ್ರಾಜೆಕ್ಟ್ ಎಂದು ನಾಕರಣ ಮಾಡಲಾಗಿದೆ.
2016ರಲ್ಲಿ ಮೊದಲಿಗೆ ಇದು ಮುಖ್ಯವಾಹಿನಿಗೆ ಬಂದಿತ್ತು. ಅರಬ್ ಕಾರ್ಯಕರ್ತರೊಬ್ಬರು ಸಂಶಯಾಸ್ಪದ ಸಂದೇಶವನ್ನು ಸ್ವೀಕರಿಸಿದ್ದರು. ಈ ವೇಳೆ ಪೆಗಾಸಸ್ ಐಫೋನ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ ಎಂದು ನಂಬಲಾಗಿತ್ತು.