ಟೋಕಿಯೊ: ಭಾರತದ ನಿಶಾದ್ ಕುಮಾರ್ ಟೋಕಿಯೊ ಪ್ಯಾರಾಲಂಪಿಕ್ಸ್ ನಲ್ಲಿ ಪುರುಷರ ವಿಭಾಗದ ಎತ್ತರದ ಜಿಗಿತ (ಹೈಜಂಪ್, ಟಿ46/47) ನಲ್ಲಿ ರಜತ ಪದಕ ಗೆದ್ದಿದ್ದಾರೆ.
2.06 ಮೀಟರ್ ಗಳಷ್ಟು ಜಿಗಿಯುವ ಮೂಲಕ ನಿಶಾದ್ ಕುಮಾರ್ ತಮ್ಮದೇ ಏಷ್ಯನ್ ದಾಖಲೆಯನ್ನು ಸರಿಗಟ್ಟಿದ್ದಾರೆ.
ಇದೇ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಭಾರತದ ಮತ್ತೋರ್ವ ಕ್ರೀಡಾಪಟು ರಾಮ್ ಪಾಲ್ 5 ನೇ ಸ್ಥಾನ ಪಡೆದಿದ್ದು, 1.94 ಮೀಟರ್ ಜಿಗಿದಿದ್ದಾರೆ. ಅಮೆರಿಕಾದ ಡಲ್ಲಾಸ್ ವೈಸ್ (ಟಿ46) 2.06 ಮೀಟರ್ (ನಿಶಾದ್ ಕುಮಾರ್ ಅವರ ಸಮ) ಜಿಗಿದಿದ್ದು ರಜತ ಪದಕವನ್ನು ಭಾರತೀಯ ಕ್ರೀಡಾಪಟುವಿನೊಂದಿಗೆ ಹಂಚಿಕೊಂಡಿದ್ದಾರೆ.
ಈ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿರುವ ಅಮೆರಿಕದ ಮತ್ತೋರ್ವ ಕ್ರೀಡಾಪಟು ರೋಡೆರಿಕ್ ಟೌನ್ಸೆಂಡ್ 2.15 ಮೀಟರ್ ಜಿಗಿದಿದ್ದು ದಾಖಲೆ ನಿರ್ಮಿಸಿದ್ದಾರೆ. ಫೈನಲ್ ನಲ್ಲಿ ನಿಶಾದ್ ಕುಮಾರ್ 1.89 ರಿಂದ ಜಿಗಿತ ಪ್ರಾರಂಭಿಸಿ ಹಾದಿ ಸುಗಮಗೊಳಿಸಿಕೊಂಡರು. ರಾಮ್ ಪಾಲ್ ಪ್ರಾರಂಭದಲ್ಲಿ 1.84 ಮೀಟರ್ ಜಿಗಿಯುವ ಮೂಲಕ ಉತ್ತಮ ಆರಂಭ ಕಂಡುಕೊಂಡರು.