ಜಮ್ಮು: ಜಮ್ಮು ಕಾಶ್ಮೀರದ ಪೂರ್ಣ ರಾಜ್ಯ ಸ್ಥಾನಮಾನ ಮರುಸ್ಥಾಪಿಸಬೇಕು ಮತ್ತು ಅಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ವಿಧಾನಸಭೆ ಚುನಾವಣೆ ನಡೆಸಬೇಕೆಂಬ ದೇಶದ 19 ವಿಪಕ್ಷಗಳ ಜಂಟಿ ಹೇಳಿಕೆಯನ್ನು ಸ್ವಾಗತಿಸುವುದಾಗಿ ಜಮ್ಮು ಕಾಶ್ಮೀರದ ರಾಜಕೀಯ ಮುಖಂಡರು ಹೇಳಿದ್ದಾರೆ.
ಶುಕ್ರವಾರ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ 19 ವಿಪಕ್ಷಗಳ ಮುಖಂಡರು ಈ ಜಂಟಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಮೂಲಕ 19 ವಿಪಕ್ಷಗಳ ಮುಖಂಡರು ಜಮ್ಮು-ಕಾಶ್ಮೀರದ ಜನತೆಯ ಸಮರ್ಥನೀಯ ಬೇಡಿಕೆಗಳಿಗೆ ತಮ್ಮ ಪೂರ್ಣ ಬೆಂಬಲ ಸೂಚಿಸಿದ್ದಾರೆ ಮತ್ತು ಕೇಂದ್ರ ಸರಕಾರಕ್ಕೆ ಪ್ರಬಲ ಸಂದೇಶ ರವಾನಿಸಿದ್ದಾರೆ ಎಂದು ಶನಿವಾರ ಜಮ್ಮು-ಕಾಶ್ಮೀರ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯರು(ಉಪಾಧ್ಯಕ್ಷರು, ಮುಖ್ಯ ವಕ್ತಾರರು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾಧ್ಯಕ್ಷರು, ವಿವಿಧ ಉಪಸಮಿತಿ ಅಧ್ಯಕ್ಷರು) ಕೃತಜ್ಞತೆ ಸಲ್ಲಿಸಿದ್ದಾರೆ.
ಜಮ್ಮು-ಕಾಶ್ಮೀರದ ಜನತೆ ತಮ್ಮ ನ್ಯಾಯಬದ್ಧ ಹಕ್ಕುಗಳು, ಸ್ಥಾನಮಾನ, ಘನತೆ ಮತ್ತು ಅಸ್ಮಿತೆಯಿಂದ ವಂಚಿತರಾಗಿ ಅನುಭವಿಸುತ್ತಿರುವ ನೋವು ಮತ್ತು ಯಾತನೆ 19 ವಿಪಕ್ಷಗಳಿಗೆ ಅರಿವಾಗಿದೆ. ಆದರೆ ರಾಜ್ಯದ ಸ್ಥಾನಮಾನ ಮರಳಿಸಲು ಕೇಂದ್ರದಲ್ಲಿರುವ ಬಿಜೆಪಿ ಸರಕಾರ ಅನಗತ್ಯ ವಿಳಂಬ ಮಾಡುತ್ತಿದೆ. ಇದರಿಂದ ಜಮ್ಮು ಕಾಶ್ಮೀರದ ಜನರಲ್ಲಿ ಅಸಹನೆ ಮತ್ತು ಅಸಮಾಧಾನ ಹೆಚ್ಚುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ನ್ಯಾಷನಲ್ ಕಾನ್ಫರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ, ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗುಲಾಂ ಅಹ್ಮದ್ ಮೀರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂವೈ ತಾರಿಗಾಮಿ, ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜದ್ ಗನಿ ಲೋನ್, ಅವಾಮಿ ನ್ಯಾಷನಲ್ ಕಾನ್ಫರೆನ್ಸ್ ನ ಉಪಾಧ್ಯಕ್ಷ ಮುಝಫ್ಫರ್ ಶಾ ಅವರೂ ಕಾಂಗ್ರೆಸ್ ಮುಖಂಡರ ಹೇಳಿಕೆಯನ್ನು ಸ್ವಾಗತಿಸಿದ್ದಾರೆ.