ಜೈಪುರ: ಕಾಂಗ್ರೆಸ್ ನ ಸಚಿನ್ ಪೈಲಟ್ ಒಬ್ಬ ಉತ್ತಮ ನಾಯಕ, ರಾಜಸ್ಥಾನದ ಮಾಜಿ ಉಪಮುಖ್ಯಮಂತ್ರಿ ಭವಿಷ್ಯದಲ್ಲಿ ಬಿಜೆಪಿಗೆ ಸೇರಬಹುದು ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎಪಿ ಅಬ್ದುಲ್ಲಕುಟ್ಟಿ ಭಾವಿಸಿದ್ದಾರೆ.
ಕಳೆದ ವರ್ಷ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ನಿಷ್ಠಾವಂತ ಶಾಸಕರು ಬಂಡಾಯವೆದ್ದ ನಂತರ ಸಚಿನ್ ಪೈಲಟ್ ಬಿಜೆಪಿಗೆ ಸೇರುವ ಬಗ್ಗೆ ಊಹಾಪೋಹಗಳು ಎದ್ದಿದ್ದವು. ಇದರ ನಡುವೆ ರಾಜಸ್ಥಾನದಲ್ಲಿ ಕಾಂಗ್ರೆಸ್ ಅನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸಿದ ತಾನು ಬಿಜೆಪಿಗೆ ಸೇರುವುದಿಲ್ಲ ಎಂದು ಪೈಲಟ್ ಹೇಳಿದ್ದರು.
'ಸಚಿನ್ ಪೈಲಟ್ ಉತ್ತಮ ನಾಯಕ ಮತ್ತು ಅವರು ಭವಿಷ್ಯದಲ್ಲಿ ಬಿಜೆಪಿ ಸೇರುತ್ತಾರೆ ಎಂದು ನಾನು ಭಾವಿಸುತ್ತೇನೆ' ಎಂದು ಅಬ್ದುಲ್ಲಕುಟ್ಟಿ ಸುದ್ದಿಗಾರರಿಗೆ ತಿಳಿಸಿದರು.
ಇತ್ತೀಚೆಗೆ, ಕಾಂಗ್ರೆಸ್ ನಾಯಕರು ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಜಯ್ ಮಾಕೆನ್ ರಾಜಸ್ಥಾನದಲ್ಲಿ ಬಹುನಿರೀಕ್ಷಿತ ಕ್ಯಾಬಿನೆಟ್ ಪುನರ್ರಚನೆಯ ಬಗ್ಗೆ ಚರ್ಚೆ ನಡೆಸಿದರು. ಪೈಲಟ್ ನೇತೃತ್ವದ ಶಿಬಿರದಲ್ಲಿ ಅಸಮಾಧಾನ ಹೊಗೆಯಾಡುತ್ತಿದ್ದಂತೆ ರಾಜಸ್ಥಾನದಲ್ಲಿ ಸಂಪುಟ ವಿಸ್ತರಣೆ ಮತ್ತು ರಾಜಕೀಯ ನೇಮಕಾತಿಗಳ ಬೇಡಿಕೆಗಳು ವೇಗ ಪಡೆದುಕೊಂಡಿವೆ. ಕಳೆದ ತಿಂಗಳು, ಪೈಲಟ್ ಎತ್ತಿದ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಶೀಘ್ರದಲ್ಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಸೂಚಿಸಿದ್ದರು.
ಬಿಜೆಪಿ ಮುಸ್ಲಿಂರ ವಿರುದ್ಧ ಎಂದು ಕೆಲವರು ಸುಳ್ಳು ಪ್ರಚಾರ ನಡೆಸುತ್ತಿದ್ದಾರೆ ಎಂದು ಅಬ್ದುಲ್ಲಕುಟ್ಟಿ ಹೇಳಿದ್ದಾರೆ. ಬಿಜೆಪಿ ಮುಸ್ಲಿಮರ ವಿರುದ್ಧವಾಗಿದೆ ಎಂಬುದು ಸುಳ್ಳು. ನಮ್ಮ ಗೌರವಾನ್ವಿತ ಆರ್‌ಎಸ್‌ಎಸ್ ಮುಖ್ಯಸ್ಥರು ಮುಸ್ಲಿಮರು ಮತ್ತು ಹಿಂದೂಗಳು ಒಂದೇ. ಅವರ ಡಿಎನ್‌ಎ ಕೂಡ ಒಂದೇ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಎಂದು ಅವರು ಹೇಳಿದರು.
ಬಿಜೆಪಿ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ಯುವ ಪಕ್ಷವಾಗಿದೆ. ಇದು ಅದರ ತತ್ವವಾಗಿದೆ ಎಂದು ಅಬ್ದುಲ್ಲಕುಟ್ಟಿ ಹೇಳಿದರು.