ನವದೆಹಲಿ: 'ಪೆಗಾಸಸ್ ಗೂಢಚರ್ಯೆ ಪ್ರಕರಣ ಕುರಿತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಕೇಂದ್ರ ಸರ್ಕಾರವು ಬಹಿರಂಗಪಡಿಸಬೇಕು ಎಂದು ತಾನು ಬಯಸುವುದಿಲ್ಲ' ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಸ್ಪಷ್ಟಪಡಿಸಿತು.
ಪೆಗಾಸಸ್ ಗೂಢಚರ್ಯೆ ಪ್ರಕರಣವನ್ನು ಕುರಿತಂತೆ ಸ್ವತಂತ್ರ ತನಿಖೆ ನಡೆಸಲು ಕೋರಿ ಸಲ್ಲಿಕೆಯಾಗಿದ್ದ ಹಲವು ಅರ್ಜಿಗಳಿಗೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಮಂಗಳವಾರ ನೋಟಿಸ್ ಅನ್ನೂ ಜಾರಿ ಮಾಡಿತು.
ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ಪೀಠದ ಎದುರು, 'ಮಾಹಿತಿಯು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ್ದಾಗಿದೆ' ಎಂದು ಕೇಂದ್ರ ಸರ್ಕಾರ ತಿಳಿಸಿತು.
ಆಗ ಮೇಲಿನ ಮಾತು ಹೇಳಿದ ಪೀಠವು, ಈ ಕುರಿತ ಅರ್ಜಿಗಳ ವಿಚಾರಣೆಯನ್ನು 10 ದಿನದ ನಂತರ ತೆಗೆದುಕೊಳ್ಳಲಿದ್ದು, ಮುಂದೆ ಕೈಗೊಳ್ಳಬೇಕಾದ ಕ್ರಮದ ಬಗ್ಗೆ ತೀರ್ಮಾನಿಸಲಾಗುವುದು ಎಂದು ತಿಳಿಸಿತು.
ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಅನಿರುದ್ಧ ಭೋಸ್ ಅವರೂ ಸದಸ್ಯರಾಗಿದ್ದ ಪೀಠವು, ಸರ್ಕಾರ ಈ ಕುರಿತು ಸಮಗ್ರ ಪ್ರಮಾಣಪತ್ರ ಸಲ್ಲಿಸಲಿದೆ ಎಂದು ಭಾವಿಸಿದ್ದೆವು ಎಂದೂ ಹೇಳಿತು. ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಸಲ್ಲಿಸಿದ ಪ್ರಮಾಣಪತ್ರದಲ್ಲಿಯೇ ಸರ್ಕಾರ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದರು.
'ಈಗಾಗಲೇ ಪ್ರಮಾಣಪತ್ರವನ್ನು ಸಲ್ಲಿಸಲಾಗಿದೆ. ಸರ್ವೋಚ್ಚ ನ್ಯಾಯಾಲಯದ ಎದುರು ಕೇಂದ್ರ ಸರ್ಕಾರ ನಿಂತಿದೆ. ನಮ್ಮ ದೃಷ್ಟಿಕೋನದಿಂದ ಈ ಅಂಶವನ್ನು ಪರಿಶೀಲಿಸಬೇಕು' ಎಂದೂ ಮೆಹ್ತಾ ಅವರು ಕೋರಿದರು.
'ಈ ವಿಷಯದ ಕುರಿತ ಎಲ್ಲ ಅಂಶಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ತಜ್ಞರ ಸಮಿತಿಯನ್ನು ರಚಿಸಲಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಿದೆ. ಸಮಿತಿಯ ವರದಿಯನ್ನೂ ಕೋರ್ಟ್‌ಗೆ ಸಲ್ಲಿಸಲಾಗುತ್ತದೆ. ಇದರಲ್ಲಿ ಮರೆಮಾಚುವಂತಹದು ಏನೂ ಇಲ್ಲ. ಆದರೆ, ಇಲ್ಲಿ ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವೂ ಇದೆ' ಎಂದು ತಿಳಿಸಿದರು.
'ಇದು, ಸಾರ್ವಜನಿಕವಾಗಿ ಚರ್ಚೆಯಾಗಬೇಕಾದ ವಿಷಯವಲ್ಲ' ಎಂದು ಮೆಹ್ತಾ ಅಭಿಪ್ರಾಯಪಟ್ಟರು. ಪೆಗಾಸಸ್ ಗೂಢಚರ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಭಾರತೀಯ ಸಂಪಾದಕರ ಒಕ್ಕೂಟವು ಸೇರಿ ಹಲವರು ಅರ್ಜಿ ಸಲ್ಲಿಸಿದ್ದರು.