ನವದೆಹಲಿ: ತಾಲಿಬಾನಿಗರು ಭಾರತದ ರಾಯಭಾರಿ ಸಿಬ್ಬಂದಿಗಳು ಅಫ್ಘಾನಿಸ್ತಾನವನ್ನು ತೊರೆಯುವುದನ್ನು ಇಚ್ಚಿಸಿರಲಿಲ್ಲ ಎಂದು ಹೇಳಲಾಗಿದೆ. ಅಷ್ಟೇ ಅಲ್ಲದೇ ತಾಲಿಬಾನ್‌ನ ಕತಾರ್ ಕಚೇರಿಯಿಂದ ಭಾರತೀಯ ರಾಯಭಾರಿ ಸಿಬ್ಬಂದಿಗಳ ಸುರಕ್ಷತೆಯನ್ನು ಖಾತರಿ ಪಡಿಸಿ ಸಂದೇಶವೊಂದು ಬಂದಿತ್ತು ಎಂದು ಎನ್‌ಡಿಟಿವಿಗೆ ಮೂಲಗಳು ತಿಳಿಸಿದೆ ಎಂದು ವರದಿಯಾಗಿದೆ.
ಈ ಸಂದೇಶವನ್ನು ತಾಲಿಬಾನ್ ರಾಜಕೀಯ ವಿಭಾಗದ ಮುಕ್ಯಸ್ಥ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನಿಕಜೈ ಈ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಹೇಳಲಾಗಿದೆ. ಈ ಸಂದೇಶವು ಅಫ್ಘಾನಿಸ್ತಾನದಿಂದ ಭಾರತೀಯ ರಾಯಭಾರಿ ಸಿಬ್ಬಂದಿಗಳನ್ನು ವಾಪಾಸ್ ಕರೆಸಿಕೊಳ್ಳುವ ಮೊದಲೇ ಬಂದಿತ್ತು ಎಂದು ಹೇಳಲಾಗಿದೆ.
ತಾಲಿಬಾನ್ ಮುಖ್ಯಸ್ಥರು, "ಭಾರತೀಯ ರಾಯಭಾರಿ ಕಚೇರಿ ಸಿಬ್ಬಂದಿಗಳು ಹಾಗೂ ರಾಯಭಾರಿಗಳಿಗೆ ಯಾವುದೇ ಹಾನಿ ಉಂಟಾಗುವುದಿಲ್ಲ. ಹಾಗೆಯೇ ಲಷ್ಕರ್ ಹಾಗೂ ಜೈಶ್ ನಂತಹ ಸಂಘಟನೆಗಳಿಂದಲೂ ಯಾವುದೇ ಹಾನಿ ಭಾರತೀಯ ಸಿಬ್ಬಂದಿಗಳ ಮೇಲೆ ಆಗುವುದಿಲ್ಲ" ಎಂದು ಹೇಳಿದ್ದರು ಎಂದು ಮಾಹಿತಿ ದೊರಕಿದೆ.
ಆದರೆ ತಾಲಿಬಾನ್ ಅಲ್ಲದಿದ್ದರೂ ಲಷ್ಕರ್ ಹಾಗೂ ಜೈಶ್ ನಂತಹ ಸಂಘಟನೆಗಳು ಭಾರತೀಯ ರಾಯಭಾರಿಗಳು ಅಫ್ಘಾನಿಸ್ತಾನದಿಂದ ತೆರಳುವಂತೆ ಬೆದರಿಕೆ ಒಡ್ಡಿದೆ ಎಂದು ಕೂಡಾ ವರದಿ ಆಗಿದೆ. ಭಾರತವು ಅಫ್ಘಾನ್ ರಾಜಧಾನಿ ಕಾಬೂಲ್ ಅನ್ನು ತಾಲಿಬಾನ್ ವಶಕ್ಕೆ ಪಡೆದ ಹಿನ್ನೆಲೆ ಪರಿಸ್ಥಿತಿಯನ್ನು ಅವಲೋಕಿಸಿ, ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ಮತ್ತು 120 ಸಿಬ್ಬಂದಿಯನ್ನು ಕಾಬೂಲ್‌ನಿಂದ ಮಂಗಳವಾರ ಭಾರತಕ್ಕೆ ವಾಪಸ್ ಕರೆತಂದಿದೆ. ಭಾರತೀಯ ವಾಯುಪಡೆಯ ಸಿ -
17 ಹೆವಿ-ಲಿಫ್ಟ್ ವಿಮಾನವು ಎರಡನೇ ತಂಡದ ರಾಜತಾಂತ್ರಿಕರು, ಅಧಿಕಾರಿಗಳು ಮತ್ತು ಪತ್ರಕರ್ತರನ್ನು ಕಾಬೂಲ್ ನಿಂದ ಹೊತ್ತುಕೊಂಡು ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿದಿತ್ತು. ಅಫ್ಘಾನಿಸ್ತಾನದಲ್ಲಿನ ಭಾರತೀಯ ರಾಯಭಾರಿ ರುದ್ರೇಂದ್ರ ಟಂಡನ್ 120 ಇತರ ರಾಜತಾಂತ್ರಿಕರು ಮತ್ತು ಅಧಿಕಾರಿಗಳೊಂದಿಗೆ ವಿಮಾನದಲ್ಲಿದ್ದರು. ಇನ್ನು ಸೋಮವಾರ 45 ಭಾರತೀಯ ಸಿಬ್ಬಂದಿಗಳನ್ನು ಭಾರತಕ್ಕೆ ವಾಪಾಸ್ ಕರೆ ತರಲಾಗಿತ್ತು. ಆದರೆ ಇನ್ನೂ ಕೂಡಾ ಕಾಬೂಲ್ ಹಾಗೂ ಅಫ್ಘಾನಿಸ್ತಾನದ ಬೇರೆ ಪ್ರದೇಶಗಳಲ್ಲಿ ಇದ್ದಾರೆ ಎಂದು ಹೇಳಲಾಗಿದೆ. 200 ಕ್ಕೂ ಅಧಿಕ ಸಿಖ್ಖರು ಹಾಗೂ ಹಿಂದೂಗಳು ಗುರುದ್ವಾರದಲ್ಲಿ ಆಶ್ರಯ ಕೇಂದ್ರದಲ್ಲಿ ಇದ್ದಾರೆ.
ಗುರುವಾರ ಈ ಬಗ್ಗೆ ವಿಡಿಯೋ ಮೂಲಕ ಹೇಳಿಕೆ ನೀಡಿದ್ದ ತಾಲಿಬಾನ್ ರಾಜಕೀಯ ಮುಖಂ ನಯೀಮ್, ಗುರುದ್ವಾರದ ಮುಖಂಡರು ಈ ಹಿಂದೂಗಳ ಹಾಗೂ ಸಿಖ್ಖರ ಸುರಕ್ಷತೆಯ ಭರವಸೆ ನೀಡಿದ್ದಾರೆ ಎಂದು ಹೇಳಲಾಗಿದೆ. ಇನ್ನು ಸರ್ಕಾರವು, ಭಾರತಕ್ಕೆ ವಾಪಾಸ್ ಬರಲು ಇಚ್ಛಿಸುವ ಎಲ್ಲಾ ಭಾರತೀಯರನ್ನು ವಾಪಾಸ್ ಕರೆ ತರಲು ಸರ್ಕಾರ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದೆ. ಆದರೆ ಹಿಂದೂಗಳಿಗೆ ಹಾಗೂ ಸಿಖ್ಖರಿಗೆ ಪ್ರಮುಖ ಆಧ್ಯತೆ ನೀಡುತ್ತದೆ ಎಂದು ಹೇಳಿದೆ.
ತಾಲಿಬಾನಿಗರು ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದ ಬೆನ್ನಲ್ಲೇ ವಿಶ್ವದ ಹಲವು ರಾಷ್ಟ್ರಗಳು ತೀವ್ರ ಆತಂಕಕ್ಕೆ ಒಳಗಾಗಿದೆ. ಅಫ್ಘಾನಿಸ್ತಾನದಲ್ಲಿರುವ ತನ್ನ ದೇಶದ ಜನರನ್ನು ವಾಪಾಸ್ ಕರೆ ತರಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಬಗ್ಗೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಜೈ ಶಂಕರ್, "ನಾವು ಬಹಳ ಜಾಗರೂಕರಾಗಿ ಈ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದೇವೆ," ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನು ಈಗಾಗಲೇ ಭಾರತಕ್ಕೆ ಬರಲು ಇಚ್ಛಿಸುವ ಅಫ್ಘಾನಿಸ್ತಾನದ ಅಲ್ಪಸಂಖ್ಯಾತ ಸಿಖ್ ಹಾಗೂ ಹಿಂದೂಗಳಿಗೆ ಆಶ್ರಯ ನೀಡಲು ಕ್ರಮ ಕೈಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಿ ತುರ್ತು ಸಭೆ ನಡೆಸಿ ಈ ಸೂಚನೆ ನೀಡಿದ್ದಾರೆ.
ಇನ್ನು ಅಫ್ಘಾನಿಸ್ತಾನದಲ್ಲಿ ನಿನ್ನೆಯಷ್ಟೇ ಹಲವಾರು ಮಂದಿಯನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಈ ಹಿಂದೆ ಯಾರಿಗೂ ಯಾವುದೇ ಹಾನಿ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದ ತಾಲಿಬಾನ್ ಗುರುವಾರ ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿ ಕೊಂದಿದೆ. ಅಫ್ಘಾನಿಸ್ತಾನವು ಪ್ರತಿ ವರ್ಷ ಆಗಸ್ಟ್ 19 ರಂದು ಬ್ರಿಟಿಷ್ ನಿಯಂತ್ರಣದಿಂದ ಸ್ವಾತಂತ್ರ್ಯ ಲಭಿಸಿದ ದಿನವಾಗಿ ಆಚರಿಸುತ್ತದೆ. ಈ ದಿನವನ್ನು ಅನೇಕ ಮಂದಿ ಸ್ಲಾಮಿಸ್ಟ್ ಮೂಲಭೂತವಾದಿ ಗುಂಪಿನ ವಿರುದ್ಧ ಪ್ರತಿಭಟಿಸಲು ಅವಕಾಶವನ್ನು ಬಳಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಸದಾಬಾದ್ ನಗರದಲ್ಲಿ ರಾಷ್ಟ್ರೀಯ ಧ್ವಜವನ್ನು ಬೀಸಿದ ಪ್ರತಿಭಟನಾಕಾರರ ಮೇಲೆ ತಾಲಿಬಾನ್ ಗುಂಡು ಹಾರಿಸಿದೆ. ಇದರಿಂದಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ, ಹಾಗೆಯೇ ಹಲವಾರು ಮಂದಿಯ ಸಾವಿಗೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.