ದುಬೈ: ಸೌದಿ ಅರೇಬಿಯಾ ಏರ್‌ಪೋರ್ಟ್ ಮೇಲೆ ಡ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದಾರೆ.
ಯೆಮೆನ್ ನಲ್ಲಿ ಯುದ್ಧದಲ್ಲಿ ನಿರತರಾಗಿರುವಾಗ ಸೌದಿ ಅರೇಬಿಯಾದಲ್ಲಿ ಈ ಘಟನೆ ನಡೆದಿದೆ. ದಾಳಿಗೆ ತಕ್ಷಣಕ್ಕೆ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. 24 ಗಂಟೆಗಳಲ್ಲಿ ಸಂಭವಿಸುತ್ತಿರುವ ಇಂತಹ ಎರಡನೇ ದಾಳಿ ಇದಾಗಿದೆ.
ಈ ಹಿಂದಿನ ದಾಳಿಯಲ್ಲಿ ಸಾವು-ನೋವುಗಳು ಸಂಭವಿಸಿರಲಿಲ್ಲ. ಸೌದಿ ನೇತೃತ್ವದ ಮಿಲಿಟರಿ ಪಡೆ ಇರಾನ್ ಬೆಂಬಲಿತ ಶಿಯಾ ಬಂಡಾಯದವರ ವಿರುದ್ಧ ಯೆಮೆನ್ ನಲ್ಲಿ ಯುದ್ಧದಲ್ಲಿ ಕೈ ಜೋಡಿಸಿದೆ. ತಕ್ಷಣಕ್ಕೆ ಸರ್ಕಾರದಿಂದ ಡ್ರೋನ್ ದಾಳಿ ಬಗ್ಗೆ ಯಾವುದೇ ಪ್ರತಿಕ್ರಿಯೆಯೂ ದೊರೆತಿಲ್ಲ.
2015 ರಿಂದಲೂ ಯೆಮೆನ್‌ನ ಹೌತಿ ಬಂಡಾಯದವರು ಸೌದಿ ವಿರುದ್ಧ ಯುದ್ಧದಲ್ಲಿ ತೊಡಗಿದ್ದು ಹಲವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡುತ್ತಿವೆ.
ಸಿಡಿ ಮದ್ದು ತುಂಬಿದ ಡ್ರೋನ್ ನೈಋತ್ಯ ಸೌದಿ ಅರೇಬಿಯಾದಲ್ಲಿನ ವಿಮಾನ ನಿಲ್ದಾಣವನ್ನು ಟಾರ್ಗೆಟ್ ಮಾಡಿದ್ದು ಘಟನೆಯಲ್ಲಿ 8 ಮಂದಿ ಗಾಯಗೊಂಡಿದ್ದರೆ, ಪ್ರಯಾಣಿಕ ವಿಮಾನವೊಂದು ಹಾನಿಗೀಡಾಗಿದೆ.
ಇದಕ್ಕೂ ಮೊದಲು ನೈಋತ್ಯ ಯೆಮನ್ನಲ್ಲಿ ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿತ್ತು. ಈ ದುರಂತದಲ್ಲಿ ಸುಮಾರು 30 ಸೈನಿಕರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆ ಹಾಗೂ ಹೌಥಿಗಳ ನಡುವಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಡ್ರೋನ್ ದಾಳಿ ನಡೆಸಲಾಗಿತ್ತು.
ಈ ಡ್ರೋನ್ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಯಾವ ಸಂಘಟನೆಯೂ ಬಹಿರಂಗವಾಗಿ ಇದರ ಜವಾಬ್ದಾರಿ ಹೊರದ ಕಾರಣ ಈ ಕುರಿತು ಇನ್ನಷ್ಟೇ ತನಿಖೆಯಾಗಬೇಕಾಗಿದೆ.
ಈ ದುರಂತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸದ್ಯಕ್ಕೆ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.