ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳ ಆಟದಲ್ಲಿ ರೋಗದಿಂದ ರಕ್ಷಿಸಿಕೊಳ್ಳುವುದಕ್ಕೆ ಲಸಿಕೆ ವಿತರಣೆ ಅಭಿಯಾನವನ್ನು ಜಗತ್ತಿನಾದ್ಯಂತ ಎಲ್ಲ ರಾಷ್ಟ್ರಗಳು ನಡೆಸುತ್ತಿವೆ. ಈ ಲಸಿಕೆ ಅಭಿಯಾನಕ್ಕೆ ಭಾರತವೂ ಹೊರತಾಗಿಲ್ಲ. ಕೊವಿಡ್-19 ಎರಡು ಡೋಸ್ ಲಸಿಕೆ ಪಡೆದುಕೊಂಡರೆ ಅಲ್ಲಿ ಸಾಕಾ. ಎರಡು ಡೋಸ್ ಲಸಿಕೆ ಪಡೆದುಕೊಂಡವರಲ್ಲೂ ಸೋಂಕು ಪತ್ತೆಯಾಗುತ್ತಿರುವುದಕ್ಕೆ ಸಾರ್ವಜನಿಕ ವಲಯದಲ್ಲಿ ಸಾವಿರಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.
ಪ್ರತಿನಿತ್ಯ 50 ಲಕ್ಷಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಲಸಿಕೆ ನೀಡುತ್ತಿದ್ದ ದೇಶದಲ್ಲಿ ಕಳೆದೊಂದು ದಿನದಲ್ಲಿ 7,95,543 ಮಂದಿಗೆ ಲಸಿಕೆ ವಿತರಿಸಲಾಗಿದೆ. ಈವರೆಗೂ 58,25,49,595 ಮಂದಿಗೆ ಕೊವಿಡ್-19 ಲಸಿಕೆ ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದರ ಮಧ್ಯೆ ಸಾಮಾನ್ಯವಾಗಿ ಜನರು ಪಡೆದುಕೊಳ್ಳುತ್ತಿರುವುದಕ್ಕೆ ಕೊವಿಡ್-19 ಲಸಿಕೆಯ ಪ್ರಭಾವ ಎಷ್ಟು ಅವಧಿವರೆಗೂ ಇರುತ್ತದೆ. ವಿದೇಶಗಳಲ್ಲಿ ಆರಂಭಿಸಲಾಗಿರುವ ಬೂಸ್ಟರ್ ಡೋಸ್ ಎಂದರೇನು?, ಬೂಸ್ಟರ್ ಡೋಸ್ ಪರಿಕಲ್ಪನೆ ಹಿಂದಿನ ಉದ್ದೇಶವೇನು?, ಕೊವಿಡ್-19 ನಿಯಂತ್ರಿಸಲು ಬೂಸ್ಟರ್ ಡೋಸ್ ಅನಿವಾರ್ಯವೇ?, ಬೂಸ್ಟರ್ ಡೋಸ್ ಬಗ್ಗೆ ಭಾರತೀಯ ಸಾಂಕ್ರಾಮಿಕ ರೋಗ ತಜ್ಞರು ಹೇಳುವುದೇನು? ಹಾಗೂ ವಿಶ್ವ ಆರೋಗ್ಯ ಸಂಸ್ಥೆಯು ಬೂಸ್ಟರ್ ಡೋಸ್ ಬಗ್ಗೆ ಏನು ಹೇಳುತ್ತದೆ ಎಂಬುದರ ಕುರಿತು ಒಂದು ವಿಸ್ತೃತ ವರದಿಗಾಗಿ ಮುಂದೆ ಓದಿ.
ಬೂಸ್ಚರ್ ಡೋಸ್ ಬಗ್ಗೆ ಒತ್ತಡ ಹೆಚ್ಚಾಗಲು ಅಸಲಿ ಕಾರಣವೇನು?
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಅಲೆಗಳು ಹೆಚ್ಚಾಗುತ್ತಿರುವ ಹಿನ್ನೆಲೆ ರೂಪಾಂತರ ವೈರಸ್ ವಿರುದ್ಧ ಪ್ರಸ್ತುತ ಲಸಿಕೆಗಳು ಪರಿಣಾಮಕಾರಿಯಾಗಿಲ್ಲ ಎಂಬ ಅನುಮಾನ ಹುಟ್ಟಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಮೊದಲ ಬಾರಿಗೆ ಇಸ್ರೇಲ್ ಈ ಬೂಸ್ಟರ್ ಡೋಸ್ ವಿತರಣೆ ಶುರು ಮಾಡಿತು. ಕಳೆದ ಸಪ್ಟೆಂಬರ್ ತಿಂಗಳಿನಲ್ಲಿ ದೇಶದ ಜನಸಂಖ್ಯೆ ದುರ್ಬಲಗೊಳ್ಳುವ ಅಪಾಯವನ್ನು ಮನಗಂಡು ಫ್ರಾನ್ಸ್ ಮತ್ತು ಜರ್ಮನಿ ರಾಷ್ಟ್ರಗಳು ಕೂಡ ಲಸಿಕೆ ವಿತರಣೆ ಆರಂಭಿಸಿದವು. ಬೂಸ್ಟರ್ ಡೋಸ್ ಲಸಿಕೆ ವಿತರಣೆ ಬಗ್ಗೆ ಫೈಜರ್ ಕಂಪನಿ ಜೊತೆಗೆ ಯುಎಸ್ ಚರ್ಚೆ ನಡೆಸುತ್ತಿದೆ.
ಬೂಸ್ಟರ್ ಡೋಸ್ ಎಂದರೇನು?
ಕೊರೊನಾವೈರಸ್ ಲಸಿಕೆ ವಿತರಣೆಯಲ್ಲಿ ಎರಡು ಡೋಸ್ ನೀಡುವುದಕ್ಕೆ ಜಾಗತಿಕ ಮಟ್ಟದಲ್ಲಿ ಅನುಮೋದನೆ ನೀಡಲಾಗಿದೆ. ಇದರ ಹೊರತಾಗಿ ಎರಡು ಡೋಸ್ ಪಡೆದ ನಂತರ ಮೂರನೇ ಡೋಸ್ ಲಸಿಕೆಯನ್ನು ನೀಡುವುದು. ಆ ಮೂಲಕ ಪ್ರತಿಕಾಯ ವ್ಯವಸ್ಥೆಯನ್ನು ವೃದ್ಧಿಸುವ ಮತ್ತು ಡೆಲ್ಟಾ ರೂಪಾಂತರ ತಳಿಯಂತಾ ಅಪಾಯಕಾರಿ ರೋಗಾಣು ವಿರುದ್ಧ ಹೋರಾಡಬಲ್ಲ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ನಿಗದಿತಪಡಿಸಿರುವ ಎರಡು ಡೋಸ್ ಹೊರತಾಗಿ ನೀಡುವ ಮೂರನೇ ಡೋಸ್ ಲಸಿಕೆಗೆ ಬೂಸ್ಟರ್ ಡೋಸ್ ಎಂದು ಕರೆಯಲಾಗುತ್ತಿದೆ.
ಬೂಸ್ಟರ್ ಡೋಸ್ ಲಸಿಕೆ ಯಾರು ಮತ್ತು ಏಕೆ ಪಡೆಯಬೇಕು?
ಬೂಸ್ಟರ್ ಡೋಸ್ ಪಡೆದುಕೊಳ್ಳುವುದಕ್ಕೆ ಪ್ರಮುಖವಾಗಿ ಎರಡು ಕಾರಣಗಳಿವೆ. ಮೊದಲ ಡೋಸ್ ಲಸಿಕೆ ಪ್ರಭಾವ ಹಾಗೂ ಪ್ರತಿರಕ್ಷಣಾ ಶಕ್ತಿ ಕೆಲವು ಅವಧಿ ನಂತರದಲ್ಲಿ ಕಡಿಮೆಯಾಗುತ್ತದೆ. ಆ ತಕ್ಷಣಕ್ಕೆ ದೇಹದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪುನರ್ ಸ್ಥಾಪಿಸುವುದು ಮೊದಲ ಕಾರಣವಾಗಿದೆ. ಕೊವಿಡ್-19 ರೂಪಾಂತರ ತಳಿಗಳ ವಿರುದ್ಧ ಬೂಸ್ಟರ್ ಡೋಸ್ ಪರಿಣಾಮಕಾರಿಯಾಗಿ ಹೋರಾಡಬಲ್ಲ ಸಾಮರ್ಥ್ಯವನ್ನು ವೃದ್ಧಿಸುತ್ತದೆ ಎಂಬುದು ಎರಡನೇ ಕಾರಣವಾಗಿದೆ. ವಯಸ್ಕರಿಗೆ ಹಾಗೂ ವೃದ್ಧರಿಗೆ ಹೆಚ್ಚಿನ ಪ್ರಮಾಣದಲ್ಲಿ ಈ ಬೂಸ್ಟರ್ ಡೋಸ್ ನೀಡುವುದು ಸೂಕ್ತ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮತ್ತು ಸಂಶೋಧಕರು ಸಲಹೆ ನೀಡಿದ್ದಾರೆ.
ಬೂಸ್ಟರ್ ಡೋಸ್ ನೀಡಲು ಸಿದ್ಧವಿದೆಯೇ ಭಾರತ?
ಕೊವಿಶೀಲ್ಡ್ ಲಸಿಕೆ ಪಡೆದ ಆರು ತಿಂಗಳ ನಂತರದಲ್ಲಿ ಮೂರನೇ ಡೋಸ್ ಲಸಿಕೆ ನೀಡುವ ಅಗತ್ಯವಿದೆ ಎಂದು ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾದ ಚೇರ್ ಮೆನ್ ಸೈರಸ್ ಪೂನಾವಾಲಾ ಹೇಳಿದ್ದಾರೆ. ಆರು ತಿಂಗಳ ನಂತರದಲ್ಲಿ ರೋಗ ನಿರೋಧಕ ಶಕ್ತಿ ಪ್ರಮಾಣ ಇಳಿಕೆಯಾಗಿರುತ್ತದೆ ಎಂದಿದ್ದಾರೆ. ಕಳೆದ ಏಪ್ರಿಲ್ ತಿಂಗಳಿನಲ್ಲಿ ಕೊವ್ಯಾಕ್ಸಿನ್ ಲಸಿಕೆಯ ಮೂರನೇ ಡೋಸ್ ನೀಡುವುದಕ್ಕೆ ಭಾರತ್ ಬಯೋಟೆಕ್ ಸಂಸ್ಥೆಯು ಭಾರತೀಯ ಔಷಧಿ ನಿಯಂತ್ರಣ ಪ್ರಾಧಿಕಾರದಿಂದ ಅನುಮೋದನೆ ಪಡೆದುಕೊಂಡಿದೆ. ಮೊದಲ ಪ್ರಯೋಗ ಫಲಿತಾಂಶವನ್ನು ಆಗಸ್ಟ್‌ನಲ್ಲಿ ಬಹಿರಂಗಪಡಿಸುವ ನಿರೀಕ್ಷೆಯಿದ್ದು, ಅಂತಿಮ ಫಲಿತಾಂಶ ನವೆಂಬರ್ 2021ರ ವೇಳೆಗೆ ಹೊರಬರುವ ನಿರೀಕ್ಷೆಯಿದೆ.
ಮನುಷ್ಯನ ದೇಹದಲ್ಲಿರುವ ರೋಗ ನಿರೋಧಕ ಶಕ್ತಿ ವೃದ್ಧಿ
ಭಾರತದಲ್ಲಿ ಕೊರೊನಾವೈರಸ್ ಎರಡನೇ ಅಲೆಯ ಸಂದರ್ಭದಲ್ಲಿ ಡೆಲ್ಟಾ ರೂಪಾಂತರದ ವಿರುದ್ಧ ಲಸಿಕೆಯು ಪರಿಣಾಮಕಾರಿಯಾಗಿರಲಿಲ್ಲ ಎಂಬುದು ಸ್ಪಷ್ಟವಾಗಿದೆ. ಸಾಮಾನ್ಯವಾಗಿ mRNA ಮಾದರಿಯ ಲಸಿಕೆಯ ಪರಿಣಾಮವು ಆರು ತಿಂಗಳಿನಿಂದ ಒಂದು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿವರೆಗೂ ಇರುತ್ತದೆ. ಪ್ರಸ್ತುತ ಭಾರತದಲ್ಲಿ ವಿತರಿಸುತ್ತಿರುವ ಲಸಿಕೆಗಳು ಮನುಷ್ಯನ ದೇಹದಲ್ಲಿರುವ ರೋಗಾಣುವನ್ನು ಗುರುತಿಸಿ ಅವುಗಳ ವಿರುದ್ಧ ಹೋರಾಡಬಲ್ಲ ಪ್ರತಿಕಾಯಶಕ್ತಿಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
mRNA ಮಾದರಿ ಲಸಿಕೆ ಎಂದರೆ ಅರ್ಥವೇನು?
ಭಾರತದಲ್ಲಿ ಅನುಮೋದನೆ ನೀಡಲಾಗಿರುವ ಕೊವ್ಯಾಕ್ಸಿನ್ ಲಸಿಕೆಯೊಂದರನ್ನು ಹೊರತುಪಡಿಸಿ ಉಳಿದ ಮೂರು ಲಸಿಕೆಗಳು mRNA ಮಾದರಿಯ ಲಸಿಕೆಗಳಾಗಿವೆ. ಕೊವಿಶೀಲ್ಡ್, ಸ್ಪುಟ್ನಿಕ್-ವಿ ಮತ್ತು ಮಾಡರ್ನಾ ಕಂಪನಿಯ ಲಸಿಕೆಗಳು mRNA ಮಾದರಿಯದ್ದಾಗಿವೆ. ಅಸಲಿಗೆ ಈ ಮಾದರಿಯ ಲಸಿಕೆಗಳು ದೇಹದಲ್ಲಿರುವ ವೈರಸ್ ಅನ್ನು ಗುರುತಿಸಿ ಅವುಗಳ ವಿರುದ್ಧ ರಕ್ಷಣೆ ನೀಡುವುದಕ್ಕಾಗಿ ಹೆಚ್ಚುವರಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ. ಇಂಥ ಲಸಿಕೆಯನ್ನೇ mRNA ಲಸಿಕೆ ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಒಟ್ಟು ನಾಲ್ಕು ಕಂಪನಿಗಳ ಕೊರೊನಾವೈರಸ್ ಲಸಿಕೆಯ ವಿತರಣೆಗೆ ಅನುಮೋದನೆ ನೀಡಲಾಗಿದೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಹಾಗೂ ಆಸ್ಟ್ರಾಜೆನಿಕಾ ಸಂಶೋಧಿಸಿರುವ ಪುಣೆಯ ಸೀರಂ ಇನ್ಸ್ ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸುತ್ತಿರುವ ಕೊವಿಶೀಲ್ಡ್ ಲಸಿಕೆ. ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್, ರಷ್ಯಾದಲ್ಲಿ ಸಂಶೋಧಿಸಿ ಭಾರತದ ರೆಡ್ಡೀಸ್ ಕಂಪನಿ ಜೊತೆಗಿನ ಸಹಭಾಗಿತ್ವದಲ್ಲಿ ಉತ್ಪಾದನೆ ಆಗುತ್ತಿರುವ ಸ್ಪುಟ್ನಿಕ್-ವಿ ಹಾಗೂ ಮಾಡೆರ್ನಾ ಲಸಿಕೆಯನ್ನು ವಿತರಿಸುವುದಕ್ಕೆ ಕೇಂದ್ರ ವೈದ್ಯಕೀಯ ಔಷಧೀಯ ನಿಯಂತ್ರಣ ಪ್ರಾಧಿಕಾರವು ಅನುಮೋದನೆ ನೀಡಲಾಗಿದೆ.
ಬೂಸ್ಟರ್ ಡೋಸ್ ನಿಷೇಧಿಸಿದ ವಿಶ್ವ ಆರೋಗ್ಯ ಸಂಸ್ಥೆ
ಕೊವಿಡ್-19 ಬೂಸ್ಟರ್ ಲಸಿಕೆ ವಿತರಣೆಯನ್ನು ಸಪ್ಟೆಂಬರ್ ಅಂತ್ಯದವರೆಗೂ ತಾತ್ಕಾಲಿಕವಾಗಿ ನಿಷೇಧಿಸಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಧಾನ ನಿರ್ದೇಶಕ ಟೆಂಡ್ರಸ್ ಅಧನಮ್ ಹೇಳಿದ್ದಾರೆ. ಜಗತ್ತಿನ ಮುಂದುವರಿದ ರಾಷ್ಟ್ರಗಳಲ್ಲಿ ಬೂಸ್ಟರ್ ಡೋಸ್ ಲಸಿಕೆ ವಿತರಿಸಲಾಗುತ್ತಿದ್ದು, ಹಿಂದುಳಿದ ಬಡ ರಾಷ್ಟ್ರಗಳಲ್ಲಿ ಜನಸಂಖ್ಯೆಯ ಶೇ.10ರಷ್ಟು ಜನರು ಸಹ ಲಸಿಕೆಯನ್ನು ಪಡೆದುಕೊಂಡಿಲ್ಲ. ಪ್ರತಿಯೊಂದು ದೇಶಗಳಲ್ಲೂ ಕೊರೊನಾವೈರಸ್ ಲಸಿಕೆಯ ವಿತರಣೆ ಪ್ರಮಾಣ ಸಮಾನವಾಗಿರಬೇಕು. ಲಸಿಕೆ ವಿತರಣೆಯಲ್ಲಿನ ಅಸಮಾನತೆಯನ್ನು ತೊಡೆದು ಹಾಕುವ ಉದ್ದೇಶದಿಂದ ಈ ಕ್ರಮವನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೊವಿಡ್-19 ಲಸಿಕೆ ಪೂರೈಕೆ ಆಗಿದ್ದೆಷ್ಟು, ಬಳಸಿದ್ದೆಷ್ಟು?
2021ರ ಆಗಸ್ಟ್ 23ರ ಅಂಕಿ-ಅಂಶಗಳ ಪ್ರಕಾರ, 57,05,07,750 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವ ಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
* ಪೂರೈಕೆಯಾದ ಲಸಿಕೆ ಪ್ರಮಾಣ - 57,05,07,750
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 13,34,620
* ಕೊವಿಡ್-19 ಲಸಿಕೆಯ ಲಭ್ಯತೆ - 3,44,06,720
ದೇಶದಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳು
ಭಾರತದಲ್ಲಿ ಕೊರೊನಾವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕೊಂಚ ಇಳಿಮುಖವಾಗುತ್ತಿದೆ. ಒಂದು ದಿನದಲ್ಲಿ 25,072 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 44,157 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 389 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,34,756 ಏರಿಕೆಯಾಗಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,24,49,306ಕ್ಕೆ ಏರಿಕೆಯಾಗಿದೆ. ಈವರೆಗೂ 3,16,80,626 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 3,33,924 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.