ಅಭಿವೃದ್ದಿ, ಪ್ರಗತಿಗಳೇ ಮೊದಲಾದ ಕೃತಕ ಉಬ್ಬುವಿಕೆಯಲ್ಲೇ ಕನವರಿಸುವ ಭಾರತದ ಪುಟ್ಟ ರಾಜ್ಯ ಕೇರಳದ ಕಣ್ಣೂರು ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನ ಯುವಕನೋರ್ವ ಕಲಿಕಾ ಸಂಬಂಧಿ ವಿಷಯಗಳಿಗೆ ಆನ್ ಲೈನ್ ವೀಕ್ಷಣೆಗೆ ಮೊಬೈಲ್ ನೊಂದಿಗೆ ಮರವೇರಿದವ ಆಯತಪ್ಪಿ ಬಿದ್ದು, ಬೆನ್ನಿನ ಮೂಳೆ ಮುರಿತಕ್ಕೊಳಗಾಗಿ ಗಂಭೀರಾವಸ್ಥೆಯಲ್ಲಿ ಪರಿಯಾರಂ ವೈದ್ಯಕೀಯ ಕಾಲೇಜಿಗೆ ದಾಖಲಾಗಿರುವುದು ನಮ್ಮ ರಾಜ್ಯದ ದೊಡ್ಡ ಕಳಂಕವೆಂಬುದರಲ್ಲಿ ಎರಡು ಮಾತಿಲ್ಲ.
ಪ್ರಕರಣವು ಬೆಳಕಿಗೆ ಬಂದು 24 ಗಂಟೆಗಳ ಬಳಿಕ ಮಾನವ ಹಕ್ಕು ಆಯೋಗ ಘಟನೆಯ ಬಗ್ಗೆ ಸಮಗ್ರ ವರದಿಗೆ ಸ್ವಯಂ ಪ್ರೇರಣೆಯಿಂದ ದೂರು ದಾಖಲಿಸಿ ತನಿಖೆಗೆ ಆದೇಶಿಸಿದ್ದು ಸ್ತುತ್ಯರ್ಹವಾದರೂ ಇಂತಹ ಅನೇಕಾನೇಕ ಸವಾಲುಗಳು ರಾಜ್ಯಾದ್ಯಂತದಿಂದ ಸರಣಿಯಂತೆ ವರದಿಯಾಗುತ್ತಿದೆ.
ರಾಜ್ಯದ ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಸರಿಯಾದ ರಸ್ತೆ, ಸೇತುವೆ ಸಂಪರ್ಕಗಳಿಲ್ಲದ ನೂರಾರು ಹಳ್ಳಿಗಳಿವೆ. ಇಂತಹ ಬಹುಪಾಲು ಹಳ್ಳಿಗಳು ಆಸ್ಪತ್ರೆಗಳು, ಶಾಲಾ-ಕಾಲೇಜುಗಳು, ಬ್ಯಾಂಕ್, ಸರ್ಕಾರಿ ಕಚೇರಿಗಳಿಂದಲೂ ಹೆಚ್ಚು ದೂರದಲ್ಲೇ ಇವೆ. ಕರಾವಳಿಯ ಕಾಡಂಚಿ ನಲ್ಲಿರುವ ಹಳ್ಳಿಗಳ ಜನರು ಸಣ್ಣ ಕೆಲಸಗಳಿಗೂ ಬೆಟ್ಟ, ಗುಡ್ಡಗಳನ್ನು ಹತ್ತಿ-ಇಳಿದು, ಹತ್ತಾರು ಕಿ.ಮೀ. ದೂರವನ್ನು ಕಾಲ್ನಡಿಗೆಯಲ್ಲೇ ಕ್ರಮಿಸಬೇಕಾದ ಸ್ಥಿತಿ ಈಗಲೂ ಇದೆ.
ನದಿ, ಹಳ್ಳಗಳಿಗೆ ಸೇತುವೆ, ಕಾಲು ಸಂಕಗಳಿಲ್ಲದೇ ಜನರು ಜೀವವನ್ನೇ ಪಣಕ್ಕಿಟ್ಟು ಓಡಾಡುತ್ತಿರುವುದು ಅನೇಕ ಹಳ್ಳಿಗಳಲ್ಲಿ ಕಾಣಸಿಗುತ್ತದೆ. ರೋಗಿಗಳನ್ನು ಚಿಕಿತ್ಸೆಗಾಗಿ ಕಿಲೊಮೀಟರ್‍ಗಟ್ಟಲೆ ದೂರ ಹೊತ್ತೊಯ್ಯುವಂತಹ ದಯನೀಯ ಸ್ಥಿತಿ, ಪಡಿತರವನ್ನು ಹೆಗಲ ಮೇಲೆ ಹೊತ್ತುಕೊಂಡೇ ಸಾಗಿಸಬೇಕಾದ ಅನಿವಾರ್ಯವು ಗ್ರಾಮೀಣ ಜನವಸತಿಗಳಲ್ಲಿರುವ ಮೂಲಸೌಕರ್ಯದ ಕೊರತೆ ಯನ್ನು ಸಾರುತ್ತವೆ. ತುಂಬಿ ಹರಿಯುವ ಹಳ್ಳ, ನದಿಗಳನ್ನು ದಾಟಲು ಯತ್ನಿಸುವಾಗ ಜನರು ಕೊಚ್ಚಿಹೋಗುವಂತಹ ದುರ್ಘಟನೆಗಳು ಪ್ರತೀ ಮಳೆಗಾಲದಲ್ಲೂ ಸಂಭವಿಸುತ್ತಲೇ ಇವೆ. ದುರ್ಘಟನೆಗಳು ನಡೆದಾಗಲೆಲ್ಲ ಗ್ರಾಮೀಣ ಪ್ರದೇಶ ದಲ್ಲಿನ ಮೂಲಸೌಕರ್ಯದ ಕೊರತೆಯ ವಿಚಾರ ಚರ್ಚೆಯ ಮುನ್ನೆಲೆಗೆ ಬರುತ್ತದೆ. ಅಷ್ಟೇ ವೇಗವಾಗಿ ಮರೆಯೂ ಆಗುತ್ತದೆ.
ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯ ವೇಗ ಹೆಚ್ಚುವುದಿಲ್ಲ ಎಂಬುದಕ್ಕೆ ರಾಜ್ಯದ ಉದ್ದಗಲಕ್ಕೂ ನೂರಾರು ನಿದರ್ಶನಗಳು ಸಿಗುತ್ತವೆ. ಕೊರೊನಾ ಸಾಂಕ್ರಾಮಿಕ ಸೃಷ್ಟಿಸಿರುವ ಬಿಕ್ಕಟ್ಟಿನ ಈ ದಿನಗಳಲ್ಲಿ ಇಂತಹ ಹಳ್ಳಿಗಳ ಜನರ ಸಂಕಷ್ಟ ದುಪ್ಪಟ್ಟಾಗಿದೆ. ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸಾ ಸೌಲಭ್ಯ ಪಡೆಯುವುದಕ್ಕೆ ಹರಸಾಹಸಪಡಬೇಕಾದ ಸ್ಥಿತಿ ಅನೇಕ ಹಳ್ಳಿಗಳಲ್ಲಿ ಈಗಲೂ ಇದೆ. ಕೋವಿಡ್ ಪರೀಕ್ಷೆ, ಚಿಕಿತ್ಸೆ ಮತ್ತು ಲಸಿಕೆ ಪಡೆಯುವುದಕ್ಕೆ ಆರೋಗ್ಯ ಕೇಂದ್ರ ತಲುಪುವುದೇ ಇಲ್ಲಿನ ಜನರಿಗೆ ಬಹುದೊಡ್ಡ ಸವಾಲಾಗಿದೆ.
ಮಲೆನಾಡು ಮತ್ತು ಕರಾವಳಿಯ ಗುಡ್ಡಗಾಡು ಪ್ರದೇಶದ ಹಳ್ಳಿಗಳಲ್ಲಿರುವ ಈ ದುಃಸ್ಥಿತಿಗೆ ಗ್ರಾಮ ಪಂಚಾಯಿತಿಯಿಂದ ರಾಜ್ಯ ಸರ್ಕಾರದವರೆಗೆ ಎಲ್ಲರೂ ಹೊಣೆಗಾರರು. ಜನರಿಗೆ ರಸ್ತೆ, ಕುಡಿಯುವ ನೀರು, ಆರೋಗ್ಯ, ಶಿಕ್ಷಣದಂತಹ ಕನಿಷ್ಠ ಸೌಲಭ್ಯಗಳನ್ನು ಒದಗಿಸುವುದು ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ರಾಜ್ಯ ಸರ್ಕಾರದ ಜವಾಬ್ದಾರಿ. ಇದಕ್ಕಾಗಿಯೇ ಹತ್ತಾರು ಯೋಜನೆಗಳೂ ಚಾಲ್ತಿಯಲ್ಲಿವೆ. ಆದರೂ, ನೂರಾರು ಹಳ್ಳಿಗಳ ಸಂಕಷ್ಟ ಸ್ಥಿತಿಯಲ್ಲಿ ಯಾವ ಬದಲಾವಣೆಯೂ ಆಗಿಲ್ಲ. ಗ್ರಾಮೀಣ ಪ್ರದೇಶದ ಜನವಸತಿಗಳಿಗೆ ಮೂಲಸೌಕರ್ಯ ಕಲ್ಪಿಸುವ ವಿಚಾರದಲ್ಲಿ ಇರುವ ಬದ್ಧತೆಯ ಕೊರತೆಯನ್ನು ಇದು ಎತ್ತಿತೋರಿಸುತ್ತದೆ.
ಅಧ್ಯಯನ ವರದಿಯೊಂದರ ಪ್ರಕಾರ, 2019ರ ಮಾರ್ಚ್ ಅಂತ್ಯಕ್ಕೆ ರಾಜ್ಯದಲ್ಲಿ 1,90,862 ಕಿ.ಮೀ. ಉದ್ದದ ಗ್ರಾಮೀಣ ರಸ್ತೆಗಳಿದ್ದವು. ಅವುಗಳಲ್ಲಿ 1,12,315 ಕಿ.ಮೀ. ಉದ್ದದ (ಶೇ 58.85) ರಸ್ತೆಗಳು ಮಣ್ಣು ಮತ್ತು ಕಲ್ಲಿನಿಂದ ಕೂಡಿದ ಕಚ್ಚಾ ರಸ್ತೆಗಳು ಎಂಬುದು ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಯ ಸ್ಥಿತಿಗತಿಗೆ ಕನ್ನಡಿ ಹಿಡಿಯುತ್ತದೆ.
ಕೋವಿಡ್ ಬಿಕ್ಕಟ್ಟು ವೈದ್ಯಕೀಯ ಸೌಕರ್ಯದ ಅನಿವಾರ್ಯವನ್ನು ದ್ವಿಗುಣಗೊಳಿಸಿದೆ. ಸಂಚಾರಿ ಕ್ಲಿನಿಕ್‍ಗಳು, ಆಂಬುಲೆನ್ಸ್ ಸೇವೆ, ಆರೋಗ್ಯ ಕೇಂದ್ರಗಳ ಸಂಖ್ಯೆ ಹೆಚ್ಚಿಸುವಂತಹ ಕ್ರಮಗಳ ಮೂಲಕ ಗುಡ್ಡಗಾಡು ಪ್ರದೇಶದ ಜನರಿಗೆ ವೈದ್ಯಕೀಯ ಸೌಲಭ್ಯವನ್ನು ಇನ್ನಷ್ಟು ಸನಿಹವಾಗಿಸಬೇಕಾಗಿದೆ.
ಕಾಸರಗೋಡು ಜಿಲ್ಲೆ ಗಮನಿಸಿದರೆ ಮೇಲೆ ಉಲ್ಲೇಖಿಸಿದ ಸವಾಲುಗಳ ಜೊತೆಗೆ ಕಣ್ಣೂರಿನಂತದೇ ಆನ್ ಲೈನ್ ಕಲಿಕೆಗೆ ಬಹಳಷ್ಟು ಪಡಿಪಾಟಲು ಇರುವ ಅನೇಕ ಗ್ರಾಮಗಳಿವೆ. ಇತ್ತೀಚಿನ ಅಂಕಿಅಂಶವೊಂದರ ಪ್ರಕಾರ ಕೇರಳದಲ್ಲಿ ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳ ಒಟ್ಟು ಮೊಬೈಲ್ ಟವರ್ ಸಾಮಥ್ರ್ಯ ಶೇ.65 ಕ್ಕೆ ಕುಸಿದಿದೆ ಎಂದು ತಿಳಿದುಬಂದಿದೆ. ಪೈಜಿ ವಿಷಯ ಬಗ್ಗೆ ಚರ್ಚಿಸುವ ನಾವು, ನಮ್ಮಲ್ಲಿ ಇನ್ನೂ ತ್ರಿಜಿಗಿಂತ ಆಚೆಗೆ ಸೌಲಭ್ಯ (ಕೆಲವೆಡೆ ಅದೂ ಇಲ್ಲ) ಬೆಳೆದಿಲ್ಲ ಎಂಬುದನ್ನು ಪರಿಗಣಿಸಲೇಬೇಕು.
ರಸ್ತೆಗೆ ದಾರಿದೀಪ ವ್ಯವಸ್ಥೆಗೊಳಿಸುವುದೇ ಅಭಿವೃದ್ದಿ ಎಂದೇ ನಂಬಿರುವ ನಾವು ಅದೂ ಸಮರ್ಪಕವಾಗಿ ಇರದೆ ಮತ್ತೇನನ್ನೆಲ್ಲ ಹಪಹಪಿಸುತ್ತೇವೋ ಇದಕ್ಕೆಲ್ಲ ಏನೆನ್ನೋಣ!...ಯಾರನ್ನು ಹೊಣೆ ಮಾಡೋಣ?.