ಕುಂಬಳೆ: ಇಪ್ಪತ್ತು ಲಕ್ಷ ರೂ.ಗಳನ್ನು ಪಡೆದು ಬೇರೊಬ್ಬರ ಮನೆ ಮತ್ತು ಸ್ಥಳವನ್ನು ಮಾರಾಟಮಾಡಿ ವಂಚಿಸಿದ ಘಟನೆಯೊಂದು ವರದಿಯಾಗಿದ್ದು, ವಂಚಕನ ಮನೆ ಎದುರು ವಂಚನೆಗೊಳಗಾದ ಮಹಿಳೆ ನಡೆಸುತ್ತಿದ್ದ ನಿಂತು ನಡೆಸುವ ಪ್ರತಿಭಟನೆಯನ್ನು ಇನ್ನು ಮನೆಯೊಳಗಡೆಗೆ ನಡೆಸಲು ಸಿದ್ದತೆ ನಡೆಸುವುದಾಗಿ ದೂರುದಾರೆ ಬುಧವಾರ ಕುಂಬಳೆಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಯನ್ಮಾರ್ಮೂಲೆಯ ಬಾಖವಿ ನಗರದಲ್ಲಿ ಮನೆ ಖರೀದಿಸಿ ಮೋಸ ಹೋದ ಬೀಫಾತಿಮಾ, ವಂಚನೆ ನಡೆಸಿರುವ ಚೂರಿ ನಿವಾಸಿ ಸತ್ತಾರ್ ಅವರ ಮನೆಯ ಅಂಗಳದಲ್ಲಿ ನಡೆಸುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಲು ನಿರ್ಧರಿಸಿರುವುದಾಗಿ ತಿಳಿಸಿದರು. ಬೀಫಾತಿಮಾಳ ಪ್ರತಿಭಟನೆಗೆ ಬೆಂಬಲವಾಗಿ ಕ್ರಿಯಾ ಸಮಿತಿಯನ್ನು ರಚಿಸಲಾಗುವುದು ಎಂದು ಪದಾಧಿಕಾರಿಗಳು ತಿಳಿಸಿದರು.
ತಿಂಗಳ ಹಿಂದೆ, ಸತ್ತಾರ್ ಅವರು ನಾಯನ್ಮಾರ್ಮೂಲೆಯ ನೌಶಾದ್ ಮತ್ತು ಅವರ ಕುಟುಂಬದ ಮಾಲೀಕತ್ವದ ಸ್ಥಳದಲ್ಲಿ ಮನೆ ನಿರ್ಮಾಣ ಕೆಲಸ ನಿರ್ವಹಿಸುತ್ತಿದ್ದರು. ಈ ವೇಳೆ ಮೊಯ್ದು ಎಂಬವರ ನೆರವಿನೊಂದಿಗೆ ನೌಶಾದ್ ಅವರ ನಿವೇಶನದಲ್ಲಿ ಮನೆ ನಿರ್ಮಿಸಿ ಮಾರಾಟ ಮಾಡುತ್ತಿರುವುದಾಗಿ ನಂಬಿಸಿ ವಂಚಿಸಲಾಗಿದೆ ಎಂದು ದೂರಲಾಗಿದೆ. ಭೂಮಿ ಮತ್ತು ಮನೆಗಾಗಿ ಮುಂಗಡ ಹಣ ಪಡೆದು ಯಾವುದೇ ದಾಖಲಾತಿ ನಡೆಸದೆ ವಂಚಿಸಿರುವುದಾಗಿ ಅವರು ಅವಲತ್ತುಕೊಂಡಿರುವರು. ಈ ಬಗ್ಗೆ ಕಾಸರಗೋಡು ಖಾಝಿಗೆ ದೂರು ನೀಡಿದ್ದು, ಖಾಝಿ ವಿವಿಧ ನಾಯಕರ ಸಮ್ಮುಖದಲ್ಲಿ ಕರೆದಿದ್ದ ರಾಜಿ ಸಭೆಯಲ್ಲಿ ತಾನು ಹಣ ಪಡೆದಿದ್ದನ್ನು ಸತ್ತಾರ್ ಒಪ್ಪಿಕೊಂಡಿದ್ದನು. ಆದರೆ ಹಣವನ್ನು ಹಿಂತಿರುಗಿಸುವುದಾಗಲಿ, ನಿವೇಶನದ ಹಸ್ತಾಂತರ, ಮನೆ ನಿರ್ಮಾಣಕ್ಕಾಗಲಿ ಸತ್ತಾರ್ ಬಳಿಕ ಮುಂದಾಗದ ಕಾರಣ ಆತನ ಮನೆ ಎದುರು ನಿಂತು ಪ್ರತಿಭಟನೆ ನಡೆಸುತ್ತಿರುವುದಾಗಿ ಬೀಫಾತಿಮ್ಮ ತಿಳಿಸಿದರು.
ವಂಚನೆ ಕುರಿತು ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಅವರು ಹೇಳಿದರು. ಬೀಫಾತಿಮಾ ಅವರೊಂದಿಗೆ ಪೀಪಲ್ಸ್ ಆಕ್ಷನ್ ಸಮಿತಿ ಅಧ್ಯಕ್ಷ ಜುಬೇರ್ ಪಡ್ಪು ಮತ್ತು ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ್ತಿ ಜಮೀಲಾ ಅಹ್ಮದ್ ಇದ್ದರು.