ಕುಂಬಳೆ: ರಾಷ್ಟ್ರ ಭಕ್ತಿಯ ಮಹೋನ್ನತ ದ್ಯೋತಕವಾದ ಕಾರ್ಗಿಲ್ ಹೋರಾಟ ಯುವ ಜನರಿಗೆ ಎಂದಿಗೂ ಪ್ರೇರಣದಾಯಿಯಾಗಿದೆ. ರಾಷ್ಟ್ರ ಮತ್ತು ಪ್ರಜೆಗಳಾಗಿ ನಮ್ಮ ಧರ್ಮವನ್ನು ಎತ್ತಿಹಿಡಿಯಲು ಕಾರ್ಗಿಲ್ ಹೋರಾಟದ ಧೀರೋದಾತ್ತ ಸೇನಾನಿಗಳನ್ನು ಸ್ಮರಿಸುವ, ದೇಶಭಕ್ತಿಯನ್ನು ಕಾಪಿಡುವ ಕರ್ತವ್ಯ ನಮ್ಮೆಲ್ಲರದು ಎಂದು ಕಾಸರಗೋಡು ಸರ್ಕಾರಿ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್ ಕರೆನೀಡಿದರು.
ಸಮನ್ವಯ ಕಾಸರಗೋಡು ನೇತೃತ್ವದಲ್ಲಿ ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಇತ್ತೀಚೆಗೆ ಕುಂಬಳೆಯಲ್ಲಿ ನಡೆದ ಕಾರ್ಗಿಲ್ ವಿಜಯೋತ್ಸವ "ಮತ್ತೆ ಕಾರ್ಗಿಲ್ ಕವಿತೆಗಳು" ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಭಾರತದ ಸ್ವಾತಂತ್ರ್ಯ ಸಂಗ್ರಾಮ ಸಹಿತ ರಾಷ್ಟ್ರೀಯತೆಯನ್ನು ಮುನ್ನಡೆಸುವಲ್ಲಿ ಸಾಹಿತ್ಯ ಕ್ಷೇತ್ರದ ಕೊಡುಗೆಯೂ ಮಹತ್ತರವಾದುದು. ರಾಷ್ಟ್ರ ಭಕ್ತಿ ಶಕ್ತಿಯಾಗಿ ಪುಟಿದೇಳುವಲ್ಲಿ ಅಕ್ಷರ ರೂಪದ ಕ್ರಾಂತಿಗೆ ಸಾಹಿತ್ಯ ಮಹತ್ತರ ಕೊಡುಗೆ ನೀಡಿದೆ ಎಂದು ತಿಳಿಸಿದರು.
ನಿವೃತ್ತ ಸೈನಿಕ ಸುಂದರ ಅವರು ತಮ್ಮ ಸೇವಾವಧಿಯ ಸೈನ್ಯದ ಅನುಭವಗಳನ್ನು ಬಿಚ್ಚಿಟ್ಟರು. ರಾಷ್ಟ್ರ ಪ್ರೇಮವೊಂದೇ ಲಕ್ಷ್ಯವಾಗಿರುವ ಸೈನಿಕರಲ್ಲಿ ಮೇಲು-ಕೀಳು, ಜಾತಿ-ಮತ-ಧರ್ಮಗಳು, ಧನ ಸಂಪಾದನೆ ಮೊದಲಾದ ಯಾವುದೇ ಉದ್ದೇಶಗಳಿಲ್ಲದೆ ಅಂತಃಕರಣದಲ್ಲಿ ಪುಟಿದೇಳುವ ಕರ್ತವ್ಯ ಶಕ್ತಿಯೊಂದೇ ತುಡಿಯುತ್ತಿರುತ್ತದೆ ಎಮದರು.
ಕವಿಗಳಾದ ರವೀಂದ್ರನ್ ಪಾಡಿ, ಸುನಂದ ಟೀಚರ್, ಸಾವಿತ್ರಿ ಟೀಚ್, ದೇವರಾಜ್ ಕುಂಬಳೆ, ನಾಗೇಶ್ ಕಾರ್ಲೆ ಮೊದಲಾದವರು ಕಾರ್ಗಿಲ್ ಕವಿತೆಗಳನ್ನು ವಾಚಿಸಿದರು. ಸಮನ್ವಯದ ಸಂಯೋಜಕ ದಾಮೋದರ ಸ್ವಾಗತಿಸಿ, ನಿರೂಪಿಸಿದರು. ವೇಲಾಯುಧನ್ ಕುಂಬಳೆ ವಂದಿಸಿದರು. ನಾರಾಯಣ ಕುಂಬಳೆ, ಜಯರಾಮ ಪೂಜಾರಿ ಬಂಬ್ರಾಣ ಸಹಕರಿಸಿದರು. ಈ ಸಂದರ್ಭ ಹಿರಿಯ ಸಾಹಿತಿ, ಗ್ರಂಥ ಸಂಪಾದಕ ದಿ.ಕೇಳು ಮಾಸ್ತರ್ ಅಗಲ್ಪಾಡಿ ಅವರ ಸಾಹಿತ್ಯ ಸೇವೆಗಳ ಸಂಸ್ಮರಣೆ ನಡೆಯಿತು.