ವಿಶ್ವಸಂಸ್ಥೆ: ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಳ್ಳುವ ಮೂಲಕ ಉದ್ಭವವಾಗಿರುವ ಮಾನವೀಯ ಬಿಕ್ಕಟ್ಟಿನಿಂದಾಗಿ 1.4 ಕೋಟಿ ಮಂದಿಗೆ ತಿನ್ನಲು ಆಹಾರ ಕೂಡ ಲಭಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.
ಕೊರೊನಾ ಸಾಂಕ್ರಾಮಿಕದಿಂದ ಬಳಲುತ್ತಿರುವ ಆ ದೇಶದಲ್ಲಿ ಈ ಹೊಸ ಬಿಕ್ಕಟ್ಟು, ಗಂಭೀರ ಆರ್ಥಿಕ ಹಾಗೂ ಸಾಮಾಜಿಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ವಿಶ್ವ ಸಂಸ್ಥೆ ಆಹಾರ ಕಾರ್ಯಕ್ರಮಗಳ ಆಫ್ಘನ್ ನಿರ್ದೇಶಕಿ ಮೇರಿ ಎಲ್ಲೆನ್, ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಶೇ. 40 ಕ್ಕಿಂತಲೂ ಹೆಚ್ಚು ಬೆಳೆ ವಿಫಲವಾಗಿದ್ದು, ಸಂಗ್ರಹಿಸಿದ ಆಹಾರ ಧಾನ್ಯಗಳು ನಾಶವಾಗಿವೆ ಎಂದು ಅವರು ಹೇಳಿದ್ದಾರೆ.
ವಿಶ್ವಸಂಸ್ಥೆ ಪ್ರತಿನಿಧಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, ತಾಲಿಬಾನಿಗಳ ಆಗಮನದಿಂದ ಸಾವಿರಾರು ಜನರು ನಿರಾಶ್ರಿತರಾಗುತ್ತಿದ್ದಾರೆ. ಅವರಿಗೆ ಆಹಾರ ಒದಗಿಸುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಿದ್ದಾರೆ.
ಮೇ ತಿಂಗಳಲ್ಲಿ 40 ಲಕ್ಷ ಜನರ ಹಸಿವನ್ನು ನೀಗಿಸಲಾಗಿದೆ. ಮುಂದಿನ ಕೆಲವು ತಿಂಗಳಲ್ಲಿ 90 ಲಕ್ಷ ಜನರಿಗೆ ಆಹಾರ ಕಲ್ಪಿಸಬೇಕಾದ ಸಮಸ್ಯೆ ಸೇರಿದಂತೆ ಇನ್ನೂ ಹಲವು ಸವಾಲುಗಳಿವೆ. ಈ ಹಸಿವಿನ ಬಿಕ್ಕಟು ನಿವಾರಿಸಲು ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳಲು ತುರ್ತಾಗಿ 20 ಕೋಟಿ ಅಮೆರಿಕನ್ ಡಾಲರ್ ಅಗತ್ಯವಿದೆ ಎಂದು ಮೇರಿ ವಿವರಿಸಿದರು.