ಬದಿಯಡ್ಕ: ಪ್ರಾಚೀನವಾದ ಗಮಕ ಕಲೆ ಭಾರತೀಯ ಸಂಸ್ಕøತಿಯ ದ್ಯೋತಕವಾಗಿದೆ. ಶ್ರಾವಣ ಮಾಸದಲ್ಲಿ ಶ್ರೀಮದ್ರಾಮಾಯಣದ ವಾಚನ-ವ್ಯಾಖ್ಯಾನಗಳನ್ನು ಮಾಡುವುದರಿಂದ ಮಾನವರ ಜೀವನವು ಸಾರ್ಥಕವಾಗುವುದು ಎಂದು ನಿವೃತ್ತ ಪ್ರಾಂಶುಪಾಲ, ಶ್ರೀಮದ್ ಎಡನೀರು ಮಠದ ಆಡಳಿತಾಧಿಕಾರಿ ರಾಜೇಂದ್ರ ಕಲ್ಲೂರಾಯ ಅವರು ಅಭಿಪ್ರಾಯ ಪಟ್ಟರು.
ಕರ್ನಾಟಕ ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕ ಮತ್ತು ಸಿರಿಗನ್ನಡ ವೇದಿಕೆಯ ಕೇರಳ ಗಡಿನಾಡ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆದಿ ಗಮಕಿಗಳಾದ ಕುಶಲವರ ಜನ್ಮಮಾಸಾಚರಣೆಯ ಸರಣಿ ಕಾರ್ಯಕ್ರಮದ ಅಂಗವಾಗಿ ಬುಧವಾರ ಶ್ರೀಮದ್ ಎಡನೀರು ಮಠದಲ್ಲಿ ಆಯೋಜಿಸಲಾದ ಎರಡನೇ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀ ಪಾದಂಗಳವರು ದೀಪ ಬೆಳಗುವುದರೊಂದಿಗೆ ಸಮಾರಂಭವನ್ನು ಉದ್ಘಾಟಿಸಿ ಆಶೀರ್ವಚನವಿತ್ತರು.ಗಮಕ ಕಲಾ ಪರಿಷತ್ತಿನ ಕೇರಳ ಗಡಿನಾಡ ಘಟಕದ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್ ಅಧ್ಯಕ್ಷತೆ ವಹಿಸಿದರು.
ಈ ಸಂದರ್ಭದಲ್ಲಿ ವಿದ್ವಾನ್ ನೆತ್ತರಗುಳಿ ತಿಮ್ಮಣ್ಣ ಭಟ್ಟರ ಹಳಗನ್ನಡದ ಶ್ರೀರಾಮ ಚರಿತ ಮಾನಸದ ಆಯ್ದಭಾಗವನ್ನು ನಾಯರ್ಪಳ್ಳ ಸಹೋದರಿಯರಾದ ಕುಮಾರಿ ಮೇಧಾ ಭಟ್ ಮತ್ತು ಕುಮಾರಿ ಶ್ರದ್ಧಾ ಭಟ್ ಸುಶ್ರಾವ್ಯವಾಗಿ ವಾಚನ ಹಾಗೂ ವ್ಯಾಖ್ಯಾನಗಳನ್ನು ಮಾಡಿದರು.
ಸಿರಿಗನ್ನಡ ವೇದಿಕೆಯ ಅಧ್ಯಕ್ಷ ಮತ್ತು ಗಮಕ ಕಲಾ ಪರಿಷತ್ತಿನ ಕಾರ್ಯದರ್ಶಿ ವಿ.ಬಿ.ಕುಳಮರ್ವ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಖ್ಯಾತ ವ್ಯಂಗ್ಯಚಿತ್ರಕಾರ ವೆಂಕಟ ಭಟ್ ಎಡನೀರು ವಂದಿಸಿದರು.