ಕಾಸರಗೋಡು: ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜು ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಜಿಲ್ಲಾ ಪಿಡುಗು ನಿವಾರಣೆ ಪ್ರಾಧಿಕಾರದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣ್‍ವೀರ್ ಚಂದ್ ಅಧ್ಯಕ್ಷತೆ ವಹಿಸಿದ್ದರು.
ಪ್ರೆಷರ್ ಸ್ವಿಂಗ್ ಆಂಡ್ ಸ್ಪೋರ್ಷನ್ ( ಪಿ.ಎಸ್.ಎ) ತಾಂತ್ರಿಕತೆಯ ಆಕ್ಸಿಜನ್ ಘಟಕ ಇಲ್ಲಿ ಸ್ಥಾಪಿಸಲಾಗುವುದು. ಮೆಡಿಕಲ್ ಕಾಲೇಜಿನಲ್ಲಿ ಪೆಟ್ರೋಲಿಯಂ-ಪ್ರಾಕೃತಿಕ ಗ್ಯಾಸ್ ಸಚಿವಾಲಯದ ಆದೇಶ ಪ್ರಕಾರ ಪೆಟ್ರೋನೆಟ್ ಎಲ್.ಎನ್.ಜಿ. ಮತ್ತು ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಪ್ರಾಧಿಕಾರ(ಎನ್.ಎಚ್.ಎ.ಐ.) ಘಟಕಗಳನ್ನು ಸ್ಥಾಪಿಸಲಿವೆ. ಪೆಟ್ರೋನೆಟ್ ಎಲ್.ಎನ್.ಜಿ. ಮೆಡಿಕಲ್ ಕಾಲೇಜಿನಲ್ಲಿ ಸ್ಥಾಪಿಸುವ ಆಕ್ಸಿಜನ್ ಘಟಕದ ಸಿವಿಲ್ ವರ್ಕ್ ಗಳಿಗೆ ಜಿಲ್ಲಾ ನಿರ್ಮಿತಿ ಕೇಂದ್ರ ಸಲ್ಲಿಸಿರುವ ಎಸ್ಟಿಮೇಟ್ ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಟೆಸ್ಟ್ ಗಳ ಸಂಖ್ಯೆ ಹೆಚ್ಚಳಗೊಳಿಸುವ ಪ್ರಕ್ರಿಯೆಯ ಅಂಗವಾಗಿ ಲ್ಯಾಬ್ ಟೆಕ್ನೀಶಿಯನ್, ಮಲ್ಟಿ ಪರ್ಪಸ್ ವರ್ಕರ್, ಸಾಫ್ ನರ್ಸ್, ಡಾಟಾ ಎಂಟ್ರಿ ಆಪರೇಟರ್ ಇತ್ಯಾದಿ ಹುದ್ದೆಗಳಿಗೆ ತಾತ್ಕಾಲಿಕ ಕರಾರಿನಲ್ಲಿ ನೇಮಕಾತಿ ನಡೆಸಲಾದವರಿಗೆ ಸರ್ಕಾರ ಅಂಗೀಕರಿಸಿರುವ ರೀತಿಯ ವೇತನ ನೀಡಲು ಸಭೆ ತೀರ್ಮಾನಿಸಿದೆ.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್, ಹೆಚ್ಚುವರಿ ದಂಡನಾಧಿಕಾರಿ ಎ.ಕೆ.ರಮೇಂದ್ರನ್, ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಕೆ.ಆರ್.ರಾಜನ್ ಮೊದಲಾದವರು ಉಪಸ್ಥಿತರಿದ್ದರು.