ಬೆಂಗಳೂರು: ಮಾನಸಿಕ ದುರ್ಬಲ್ಯ ಅನುಭವಿಸುತ್ತಿರುವ, ಸಂಕಷ್ಟದಲ್ಲಿರುವ ಮಕ್ಕಳಿಗೆ ಸಲಹೆ ನೀಡಲು, ಆಥ್ಮಸ್ಥೈರ್ಯ ತುಂಬಲು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ನಿಮ್ಹಾನ್ಸ್ ಜತೆಯಾಗಿ 'ಸಂವಾದ್' ಎಂಬ ವೇದಿಕೆ ರೂಪಿಸಿವೆ ಎಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ನಿಮ್ಹಾನ್ಸ್-ನರವಿಜ್ಞಾನ ಸಂಸ್ಥೆಯ 'ಸಂವಾದ್' ('SAMVAD- Support, Advocacy, & Mental health interventions for children in Vulnerable circumstances and Distress) ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ಮೃತಿ ಇರಾನಿ, 'ಸಂವಾದ್'ನಿಂದ ದೇಶದ ಕರ್ತವ್ಯನಿರತ ಒಂದು ಲಕ್ಷ ಜನರಿಗೆ ನೆರವು ಸಿಕ್ಕಿದೆ. ಮಕ್ಕಳ ರಕ್ಷಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಜಾಗೃತಿ ಮೂಡಿಸಲು ಪಂಚಾಯತಿ ರಾಜ್ ಇಲಾಖೆಯೊಂದಿಗೆ ಸೇರಿ 'ಸಂವಾದ್' ಕೆಲಸ ಮಾಡುತ್ತಿದೆ,' ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.
'ಸಂವಾದ್' ಕೇವಲ ಸಂಕಷ್ಟದಲ್ಲಿರುವ ಮಕ್ಕಳು ಮತ್ತು ಕರ್ತವ್ಯ ನಿರತರಿಗಾಗಿ ಮಾತ್ರ ಕಾರ್ಯ ನಿರ್ವಹಿಸುತ್ತಿಲ್ಲ, ಜೊತೆಗೆ ಕೌಟುಂಬಿಕ ದೌರ್ಜನ್ಯ, ಮದ್ಯಪಾನ ಮೊದಲಾದವುಗಳಿಂದ ಸಂಕಷ್ಟ ಅನುಭವಿಸುತ್ತಿರು ಕುಟುಂಬಗಳ ಮೇಲಿನ ಪರಿಣಾಮದ ನಿವಾರಣೆಗೆ ಕೆಲಸ ಮಾಡುತ್ತಿದೆ. ಸಂಶೋಧನೆಯನ್ನೂ ನಡೆಸುತ್ತಿದೆ' ಎಂದರು.
ನಿಮ್ಹಾನ್ಸ್ ನ ಮಕ್ಕಳು ಮತ್ತು ಹದಿಹರೆಯದವರ ಮಾನಸಿಕ ಆರೋಗ್ಯ ವಿಭಾಗದ ಹಿರಿಯ ಪ್ರಾಧ್ಯಾಪಕ ಡಾ. ಶೇಖರ್ ಶೇಷಾದ್ರಿ ಸಂವಾದ್ ಕುರಿತು ವಿವರ ನೀಡಿದರು. ಈ ವರ್ಷ 'ಸಂವಾದ್' ದೇಶಾದ್ಯಂತ ಮಕ್ಕಳ ಸಂರಕ್ಷಣೆಯ ಅಗತ್ಯಗಳನ್ನು ಪೂರೈಸಲು ಇನ್ನೂ ಹೆಚ್ಚು ಕೆಲಸ ಮಾಡಲಿದೆ ಎಂದರು.
ನಿಮ್ಹಾನ್ಸ್‌ನ ನಿರ್ದೇಶಕಿ ಡಾ. ಪ್ರತಿಮಾ ಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.