ಮಂಜೇಶ್ವರ: ತಲಪಾಡಿ ಗಡಿಯಲ್ಲಿ ಕರ್ನಾಟಕ ಸರಕಾರ ಕೋವಿಡ್ ತಪಾಸಣೆ ಹೆಸರಲ್ಲಿ ಅಂತರಾಜ್ಯ ಯಾತ್ರಿಕರನ್ನು ತಡೆಯುವುದನ್ನು ಪ್ರತಿಭಟಿಸಿ ಕೇರಳದಿಂದ ಲಸಿಕೆ ತೆಗೆದು ಆಗಮಿಸುವ ಯಾತ್ರಿಕರನ್ನು ಯಾವುದೇ ತಪಾಸಣೆಗೊಳಪಡಿಸದೆ ಗಡಿ ಪ್ರವೇಶಿಸಲು ಮುಕ್ತ ಅವಕಾಶ ಕಲ್ಪಿಸಬೇಕೆಂಬುದಾಗಿ ಆಗ್ರಹಿಸಿ ಎಡ ಹಾಗೂ ಬಲ ರಂಗದ ಯುವಜನ ಸಂಘಟನೆಯ ನೇತೃತ್ವದಲ್ಲಿ ತಲಪಾಡಿ ಗಡಿಯಲ್ಲಿ ಸೋಮವಾರವೂ ಪ್ರತಿಭಟನಾ ಧರಣಿ ನಡೆಯಿತು.
ಎಡರಂಗದ ಯುವಜನ ಸಂಘಟನೆ ಕೇರಳಕ್ಕೆ ಕರ್ನಾಟಕದಿಂದ ಆಗಮಿಸುವ ವಾಹನಗಳನ್ನು ತಡೆದು ಪ್ರತಿಭಟನಾ ಧರಣಿ ನಡೆಸಿತು. ಎ ಐ ವೈ ಎಫ್ ಜಿಲ್ಲಾ ಉಪಾಧ್ಯಕ್ಷ ಅಜಿತ್ ಎಂ ಸಿ ಯವರ ಅಧ್ಯಕ್ಷತೆಯಲ್ಲಿ ನಡೆದ ಪ್ರತಿಭಟನಾ ಧರಣಿಯನ್ನು ಸಿಪಿಐ ಜಿಲ್ಲಾ ನಿರ್ವಾಹಕ ಸಮಿತಿ ಸದಸ್ಯ ಬಿವಿ ರಾಜನ್ ಉದ್ಘಾಟಿಸಿದರು.
ಲಸಿಕೆ ಪಡೆದವರಿಗೆ ಸಂಚಾರಕ್ಕೆ ಮುಕ್ತ ಅವಕಾಶ ಕಲ್ಪಿಸಲು ಕರ್ನಾಟಕ ಸರಕಾರ ತಯಾರಾಗಬೇಕು, ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ಪ್ರತಿಭಟನೆಯ ತೀವೃತೆಯನ್ನು ಹೆಚ್ಚಿಸುವುದಾಗಿ ಪ್ರತಿಭಟನಾ ನಿರತರು ಎಚ್ಚರಿಸಿದರು. ನೇತಾರರಾದ ತಾಜುದ್ದೀನ್, ಸಾದಿಖ್ ಚೆರುಗೋಳಿ, ಹಾರಿಸ್ ಪೈವಳಿಕೆ , ಅಶ್ರಫ್ ಕುಂಜತ್ತೂರು , ಪ್ರಸಾಂತ್ ಕನಿಲ, ಮುಸ್ತಫಾ ಕಡಂಬಾರ್, ದಯಾಕರ ಮಾಡ, ನ್ಯಾಯವಾದಿ ಉದಯ ಕುಮಾರ್, ಸಚಿತಾ ರೈ ಮೊದಲಾದವರು ಮಾತನಾಡಿದರು.
ಯುಡಿವೈಎಫ್ ವತಿಯಿಂದ ನಡೆದ ಪ್ರತಿಭಟನೆಗೆ ಸೈಫುಲ್ಲಾ ತಂಗಳ್, ಹರ್ಷಾದ್ ವರ್ಕಾಡಿ, ಸಿದ್ದೀಖ್ ಮಂಜೇಶ್ವರ , ಮುಸ್ತಫಾ ಉದ್ಯಾವರ ಮೊದಲಾದವರು ನೇತೃತ್ವ ನೀಡಿದರು.
ಲಸಿಕೆ ಪ್ರಮಾಣಪತ್ರವನ್ನು ಉರಿಸಿ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ನಡೆದ ಪ್ರತಿಭಟನಾ ಧರಣಿಯಲ್ಲಿ ನೇತಾರರು ಹಾಗೂ ಕಾರ್ಯಕರ್ತರು ಪಾಲ್ಗೊಂಡರು. ಪ್ರತಿಭಟನಾ ಸ್ಥಳಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಆಗಮಿಸಿ ಸ್ಥಿತಿಗತಿಯ ಬಗ್ಗೆ ಅವಲೋಕನ ನಡೆಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯೊಂದಿಗೆ ಮಾತುಕತೆ ನಡೆಸುವುದಾಗಿ ಮಾಧ್ಯಮದವರಿಗೆ ತಿಳಿಸಿದರು.