ನವದೆಹಲಿ: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಇಡೀ ಜಗತ್ತು ಮಹಾಮಾರಿ ಮೇಲೆ ಲಕ್ಷ್ಯ ವಹಿಸುತ್ತಿದೆ. ಕೊವಿಡ್-19 ಸೋಂಕಿನಿಂದ ರಕ್ಷಿಸಿಕೊಳ್ಳುವುದು ಹೇಗೆ ಎಂಬ ಬಗ್ಗೆ ಸಾರ್ವಜನಿಕರು ಮತ್ತು ಸರ್ಕಾರಗಳು ಯೋಜನೆ ಹಾಕಿಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ಮತ್ತು ವೈದ್ಯಕೀಯ ಸೌಲಭ್ಯಗಳೇ ಸಿಗದಂತಾ ಪರಿಸ್ಥಿತಿ ಸೃಷ್ಟಿಯಾಗಿದೆ.
ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಕೊರೊನಾವೈರಸ್ ಸೋಂಕು ತಗುಲದ ವ್ಯಕ್ತಿಗಳು ವೈದ್ಯಕೀಯ ಚಿಕಿತ್ಸೆ ಇಲ್ಲದೇ ಪರಿತಪಿಸಿರುವ ಬಗ್ಗೆ ಭಾರತದ ಕೇಂದ್ರೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ದೇಶದಲ್ಲಿ ಶೇ. 2/3 ರಷ್ಟು ಜನರು ಕೊವಿಡ್-19 ಸೋಂಕಿನ ಹೊರತಾಗಿ ಬೇರೆ ಚಿಕಿತ್ಸೆ ಪಡೆದುಕೊಳ್ಳಲಾಗದೇ ಪರದಾಡಿದ್ದಾರೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.
ಭಾರತದಲ್ಲಿ ಕೊವಿಡ್-19 ಕಾಲದಲ್ಲಿ ಕೊರೊನಾವೈರಸ್ ಸೋಂಕಿನ ಹೊರತಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರ ಪ್ರಮಾಣ ಎಷ್ಟಿತ್ತು?, ಅನಾರೋಗ್ಯ ಹೊಂದಿರುವ ಸಾರ್ವಜನಿಕರು ಎದುರಿಸಿದ ಸವಾಲುಗಳು ಹೇಗಿದ್ದವು?, ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಆರೋಗ್ಯ ವ್ಯವಸ್ಥೆ ಲಭ್ಯವಿತ್ತಾ?, ಪ್ರಸ್ತುತ ದೇಶದಲ್ಲಿ ಕೊವಿಡ್-19 ಸೋಂಕಿತರ ಅಂಕಿ-ಸಂಖ್ಯೆ ಮತ್ತು ಇಂದಿನ ವೈದ್ಯಕೀಯ ವ್ಯಸ್ಥೆ ಹೇಗಿದೆ ಎಂಬುದರ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ಓದಿ.
ರೋಟಿನ್ ಚೆಕ್ ಅಪ್ ಮಾಡಿಸಿಕೊಳ್ಳುವುದಕ್ಕೂ ಪರದಾಟ
ಭಾರತದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ಮತ್ತು ಲಾಕ್ ಡೌನ್ ನಿರ್ಬಂಧಗಳಿಂದ ಎದುರಾದ ಸಮಸ್ಯೆಗಳು ಒಂದು ಎರಡಲ್ಲ. ಕೊವಿಡ್-19 ಸೋಂಕಿತರ ತಪಾಸಣೆ ನಡುವೆ ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ರೋಗಿಗಳಿಗೆ ಚಿಕಿತ್ಸೆ ಸಿಗದಂತಾ ಸ್ಥಿತಿ ನಿರ್ಮಾಣವಾಗಿತ್ತು. ದೇಶದಲ್ಲಿ ಕೊರೊನಾವೈರಸ್ ಸೋಂಕು ಇಲ್ಲದ ಮೂವರಲ್ಲಿ ಇಬ್ಬರು ಇತರೆ ವೈದ್ಯಕೀಯ ಚಿಕಿತ್ಸೆ ಪಡೆದುಕೊಳ್ಳುವುದಕ್ಕೂ ಸಾಧ್ಯವಾಗದಂತಾ ಪರಿಸ್ಥಿತಿ ಸೃಷ್ಟಿಯಾಗಿತ್ತು ಎಂಬುದು ಐಸಿಎಂಆರ್ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.
ಆಸ್ಪತ್ರೆಗಳಿಂದ ಅಂತರ ಕಾಯ್ದುಕೊಂಡ ಸಾರ್ವಜನಿಕರು
ಕೊರೊನಾವೈರಸ್ ಸೋಂಕು ಹರಡುವಿಕೆ ಭೀತಿಯಲ್ಲಿ ಸಣ್ಣಪುಟ್ಟ ಮತ್ತು ಸಾಮಾನ್ಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರು ಸುಖಾಸುಮ್ಮನೆ ಆಸ್ಪತ್ರೆಗಳಿಗೆ ತೆರಳುವುದು ಬೇಡ ಎಂದು ವೈದ್ಯರು ಮತ್ತು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದರು. ಇನ್ನೊಂದು ದಿಕ್ಕಿನಲ್ಲಿ ಕೊವಿಡ್-19 ಸೋಂಕಿನಿಂದ ಹೆದರಿದ ಸಾವಿರಾರು ಜನರು ತಮ್ಮ ದಿನನಿತ್ಯದ ಆರೋಗ್ಯ ತಪಾಸಣೆಗೂ ಆಸ್ಪತ್ರೆಗಳತ್ತ ಹೋಗುವುದಕ್ಕೆ ಹಿಂದೇಟು ಹಾಕಿದರು. ಆಸ್ಪತ್ರೆಗಳಿಗೆ ಹೋದರೆ ಎಲ್ಲಿ ಕೊರೊನಾವೈರಸ್ ಎಂದು ದಿಗ್ಬಂಧನದಲ್ಲಿ ಇರಿಸುತ್ತಾರೋ ಏನೋ ಎಂಬ ಭಯದಲ್ಲಿ ಸಾವಿರಾರು ಜನರು ಪ್ರಾಥಮಿಕ ಲಕ್ಷಣಗಳು ಗೋಚರಿಸಿದಾಗ ಆಸ್ಪತ್ರೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಇದರ ಮಧ್ಯೆ ಆಸ್ಪತ್ರೆಗೆ ಹೋಗುವುದಕ್ಕೆ ಸಿದ್ಧರಿದ್ದ ಜನರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲೂ ಸೂಕ್ತ ವೈದ್ಯಕೀಯ ವ್ಯವಸ್ಥೆ ಸಿಗದಿರುವುದು ಅಧ್ಯಯನದಲ್ಲಿ ಗೊತ್ತಾಗಿದೆ.
ದೇಶದಲ್ಲಿ ಶೇ.69ರಷ್ಟು ಜನರ ಸಾಮಾನ್ಯ ತಪಾಸಣೆಗೆ ಅಡೆತಡೆ
ಭಾರತದಲ್ಲಿ ಕೊರೊನಾವೈರಸ್ ಸೋಂಕಿತರ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಇಂಥ ಕಾಲದಲ್ಲಿ ಕೊವಿಡ್-19 ಹೊರತಾಗಿ ಇತರೆ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ರೋಗಿಗಳಿಗೆ ಸೂಕ್ತ ರೀತಿಯಲ್ಲಿ ಚಿಕಿತ್ಸೆ ಸಿಗುತ್ತಿಲ್ಲ. ದೇಶದಲ್ಲಿ ಶೇ.2/3ರಷ್ಟು ಸಾರ್ವಜನಿಕರು ವೈದ್ಯಕೀಯ ಸೌಲಭ್ಯಗಳು ಸಿಗದೇ ಪರಿತಪಿಸಿದ್ದಾರೆ ಎಂಬುದು ಐಸಿಎಂಆರ್ ಅಧ್ಯಯನದಲ್ಲಿ ಗೊತ್ತಾಗಿದೆ. ವೈದ್ಯಕೀಯ ತಪಾಸಣೆ ವೇಳೆ ಸಮಸ್ಯೆಗಳನ್ನು ಎದುರಿಸಿದ ಶೇಕಡಾವಾರು ಪ್ರಮಾಣವನ್ನು ಐಸಿಎಂಆರ್ ತನ್ನ ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಿದೆ.
ವೈದ್ಯಕೀಯ ಸೇವೆಯಲ್ಲಿ ಸವಾಲುಗಳು:
* ದಿನನಿತ್ಯ ಆರೋಗ್ಯ ತಪಾಸಣೆಯೂ ಸಿಗದೇ ಪರಿತಪಿಸಿದವರ ಸಂಖ್ಯೆ - ಶೇ.69
* ವೈದ್ಯಕೀಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಲಾಗದೇ ನೊಂದವರ ಪ್ರಮಾಣ - ಶೇ.67
* ಆಸ್ಪತ್ರೆಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲದೇ ಬಳಲಿದವರ ಪ್ರಮಾಣ - ಶೇ.61
* ವೈದ್ಯರ ಭೇಟಿಗೆ ಸಮಯ ನಿಗದಿಪಡಿಸಿಕೊಳ್ಳಲಾಗದವರ ಸಂಖ್ಯೆ - ಶೇ.59
* ತುರ್ತು ಚಿಕಿತ್ಸೆ ಪಡೆದುಕೊಳ್ಳಲಾಗದ ರೋಗಿಗಳ ಪ್ರಮಾಣ - ಶೇ.56
* ಔಷಧಿಗಳನ್ನು ಸ್ವೀಕರಿಸುವಲ್ಲಿ ಸಮಸ್ಯೆ ಎದುರಿಸಿದವರ ಸಂಖ್ಯೆ - ಶೇ.47
* ಆರೋಗ್ಯ ಪರೀಕ್ಷೆಯಲ್ಲಿ ವಿಳಂಬ - ಶೇ.46
* ಸಾಮಾಜಿಕ ನಿರ್ಬಂಧ, ಲಾಕ್‌ಡೌನ್‌ನಿಂದ ಆಸ್ಪತ್ರೆಗಳಲ್ಲಿ ಆರೈಕೆ ಪಡೆದುಕೊಳ್ಳಲಾಗದವರ ಪ್ರಮಾಣ - ಶೇ.37
* ಆಸ್ಪತ್ರೆಗಳಿಗೆ ತೆರಳಲು ಹಣಕಾಸು ವ್ಯವಸ್ಥೆ ಮಾಡುವುದರಲ್ಲಿ ಸಮಸ್ಯೆ ಎದುರಿಸಿದವರು - ಶೇ.29
* ಕೊರೊನಾವೈರಸ್ ಸೋಂಕಿಗೆ ಹೆದರಿ ಆಸ್ಪತ್ರೆಗಳಿಂದ ಅಂತರ ಕಾಯ್ದುಕೊಂಡವರ ಸಂಖ್ಯೆ - ಶೇ.16
ದೇಶದಲ್ಲಿ ಲಾಕ್ ಡೌನ್ ಮತ್ತು ಅನ್ ಲಾಕ್ ಪ್ರಕ್ರಿಯೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗು ನಿಯಂತ್ರಿಸುವ ಉದ್ದೇಶದಿಂದ 2020ರ ಮಾರ್ಚ್ ತಿಂಗಳಿನಲ್ಲಿ ಮೊದಲ ಬಾರಿಗೆ ಲಾಕ್ ಡೌನ್ ಜಾರಿಗೊಳಿಸಲಾಯಿತು. ತದನಂತರದಲ್ಲಿ ಮೊದಲ ಹಂತ, ಎರಡನೇ ಹಂತ ಹಾಗೂ ಮೂರನೇ ಹಂತಗಳಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಕೊವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾದ ಸಂದರ್ಭದಲ್ಲಿ ಅನ್ ಲಾಕ್ ಪ್ರಕ್ರಿಯೆಗೆ ಚಾಲನೆ ನೀಡುವುದರ ಮೂಲಕ ಚಟುವಟಿಕೆಗಳಿಗೆ ಅವಕಾಶ ನೀಡಲಾಯಿತು.
ಭಾರತದಲ್ಲಿ ಕೊವಿಡ್-19 ಸೋಂಕಿತರ ಏರಿಳಿತ
ದೇಶದಲ್ಲಿ ಶನಿವಾರ ಒಂದೇ ದಿನ 35,499 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಕಳೆದ 24 ಗಂಟೆಗಳಲ್ಲಿ 39,686 ಕೊವಿಡ್-19 ಸೋಂಕಿತರು ಗುಣಮುಖರಾಗಿದ್ದು, ಇದೇ ಅವಧಿಯಲ್ಲಿ 447 ಜನರು ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 4,28,339 ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ. ಸೋಮವಾರದ ಅಂಕಿ-ಅಂಶಗಳ ಪ್ರಕಾರ, ಭಾರತದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,19,69,954ಕ್ಕೆ ಏರಿಕೆಯಾಗಿದೆ. ಈವರೆಗೂ 3,11,37,457 ಸೋಂಕಿತರು ಗುಣಮುಖರಾಗಿದ್ದಾರೆ. ಇದರ ಹೊರತಾಗಿ 4,02,188 ಸಕ್ರಿಯ ಪ್ರಕರಣಗಳಿವೆ.
ದೇಶದಲ್ಲಿ ಇಳಿಮುಖವಾಯಿತು ಲಸಿಕೆ ವಿತರಣೆ ಪ್ರಮಾಣ
ಕಳೆದ ಕೊರೊನಾವೈರಸ್ ಲಸಿಕೆ ವಿತರಣೆ ಅಭಿಯಾನವನ್ನು ಆರಂಭಿಸಿ 205 ದಿನಗಳೇ ಕಳೆದಿದ್ದು, ಕಳೆದ 24 ಗಂಟೆಗಳಲ್ಲಿ 16,11,590 ಫಲಾನುಭವಿಗಳಿಗೆ ಕೊರೊನಾವೈರಸ್ ಲಸಿಕೆ ವಿತರಿಸಲಾಗಿದೆ. ಶನಿವಾವಾರದ ವೇಳೆಗೆ ಒಟ್ಟು 50,86,64,759 ಫಲಾನುಭವಿಗಳಿಗೆ ಕೊವಿಡ್-19 ಲಸಿಕೆಯನ್ನು ವಿತರಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಭಾರತದಲ್ಲಿ ಉತ್ಪಾದನೆ ಆಗುತ್ತಿರುವ ಕೊರೊನಾವೈರಸ್ ಲಸಿಕೆಯ ಶೇ.75ರಷ್ಟು ಪ್ರಮಾಣವನ್ನು ಕೇಂದ್ರ ಸರ್ಕಾರವೇ ಕಂಪನಿಗಳಿಂದ ನೇರವಾಗಿ ಖರೀದಿಸುತ್ತದೆ. ಹೀಗೆ ಖರೀದಿಸಿದ ಲಸಿಕೆಯನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಸರಬರಾಜು ಮಾಡಲಾಗುತ್ತದೆ. ದೇಶದಲ್ಲಿ ಪ್ರತಿಯೊಬ್ಬರಿಗೆ ಕೊವಿಡ್-19 ಲಸಿಕೆ ಸಿಗಬೇಕು ಎನ್ನುವ ಉದ್ದೇಶದಿಂದ ಉಚಿತ ಲಸಿಕೆ ವಿತರಣೆ ಅಭಿಯಾನವನ್ನು ನಡೆಸಲಾಗುತ್ತಿದೆ.
ಕೊವಿಡ್-19 ಲಸಿಕೆ ಪೂರೈಕೆ ಆಗಿದ್ದೆಷ್ಟು, ಬಳಸಿದ್ದೆಷ್ಟು?
2021ರ ಆಗಸ್ಟ್ 09ರ ಅಂಕಿ-ಅಂಶಗಳ ಪ್ರಕಾರ, 52,40,60,890 ಡೋಸ್ ಕೊರೊನಾವೈರಸ್ ಲಸಿಕೆ ಪೂರೈಕೆ ಮಾಡಲಾಗಿದೆ. ಈ ಪೈಕಿ ಎಷ್ಟು ಡೋಸ್ ಲಸಿಕೆ ಬಳಕೆಯಾಗಿದೆ, ಇನ್ನೆಷ್ಟು ಲಸಿಕೆ ಬರಬೇಕಿದೆ. ಬಾಕಿ ಉಳಿದಿರುವಲಸಿಕೆ ಪ್ರಮಾಣ ಎಷ್ಟು ಎಂಬುದನ್ನು ಪಟ್ಟಿಯಲ್ಲಿ ನೋಡಿರಿ.
ಕೊರೊನಾವೈರಸ್ ಲಸಿಕೆ ಪೂರೈಕೆ ಮತ್ತು ಲಭ್ಯತೆ ಪಟ್ಟಿ:
* ಪೂರೈಕೆಯಾದ ಲಸಿಕೆ ಪ್ರಮಾಣ - 52,40,60,890
* ಸದ್ಯ ಬರಬೇಕಾಗಿರುವ ಲಸಿಕೆ ಪ್ರಮಾಣ - 8,39,780
* ಬಳಕೆ ಆಗಿರುವ ಲಸಿಕೆ ಪ್ರಮಾಣ - 50,51,29,252
* ಕೊವಿಡ್-19 ಲಸಿಕೆಯ ಲಭ್ಯತೆ - 2,33,55,890