ನವದೆಹಲಿ: ದೇಶದಲ್ಲಿ ಮತ್ತೆ ನೈಋತ್ಯ ಮುಂಗಾರು ಚುರುಕಾಗುವ ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ.
ಆಗಸ್ಟ್ ಮೊದಲ ವಾರದಲ್ಲಿ ಕ್ಷೀಣಿಸಿದ್ದ ಮುಂಗಾರು ಇದೀಗ ಮತ್ತೆ ಚುರುಕಾಗಲಿದೆ. ಮಳೆಯಿಂದ ಬಿಡುವು ಪಡೆದುಕೊಂಡಿದ್ದ ಹಲವು ರಾಜ್ಯಗಳಲ್ಲಿ ಮತ್ತೆ ಮಳೆ ಚಟುವಟಿಕೆ ಆರಂಭವಾಗಲಿದೆ ಎಂದು ತಿಳಿಸಿದೆ.
ಗುರುವಾರದಿಂದ ಉತ್ತರ ಭಾರತದಲ್ಲಿ ಮುಂಗಾರು ಮತ್ತೆ ಚುರುಕುಗೊಳ್ಳಲಿದೆ. ಆಗಸ್ಟ್ 19ರಿಂದ 21ರವರೆಗೂ ಉತ್ತರ ಪ್ರದೇಶ ಹಾಗೂ ಉತ್ತರಾಖಂಡದ ಕೆಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ತಿಳಿಸಿದೆ.
ಕಳೆದ ಕೆಲವು ದಿನಗಳಿಂದ ಮಳೆಯಿಂದ ವಿರಾಮ ಪಡೆದುಕೊಂಡಿದ್ದ ಇತರೆ ಉತ್ತರ ರಾಜ್ಯಗಳಲ್ಲಿ, ಅಂದರೆ ಹಿಮಾಚಲ ಪ್ರದೇಶ, ಹರಿಯಾಣ, ಚಂಡೀಗಢ, ದೆಹಲಿ ಹಾಗೂ ಪಶ್ಚಿಮ ಉತ್ತರ ಪ್ರದೇಶದಲ್ಲಿ ಆಗಸ್ಟ್ 20ರಿಂದ ಮತ್ತೆ ಹೆಚ್ಚಿನ ಮಳೆ ಬೀಳಲಿದೆ ಎಂದು ತಿಳಿಸಿದೆ.
ಆಗಸ್ಟ್ 20ರ ನಂತರ ಬಿಹಾರ ಭಾರೀ ಮಳೆಯನ್ನು ಪಡೆಯಬಹುದು. ಮಹಾರಾಷ್ಟ್ರ, ಗುಜರಾತ್, ಜಾರ್ಖಂಡ್, ಪಶ್ಚಿಮ ಬಂಗಾಳ, ಮಧ್ಯಪ್ರದೇಶ ಹಾಗೂ ಒಡಿಶಾ ರಾಜ್ಯಗಳಲ್ಲಿ ಮಳೆ ಮುಂದುವರೆಯಬಹುದು. ಆಗಸ್ಟ್ 19ರಿಂದ ಈಶಾನ್ಯ ರಾಜ್ಯಗಳಲ್ಲಿ ಹಾಗೂ ಹಿಮಾಲಯ, ಪಶ್ಚಿಮ ಬಂಗಾಳ, ಸಿಕ್ಕಿಂನಲ್ಲಿ ಅಧಿಕ ಮಳೆಯಾಗಲಿದೆ ಎಂದು ಅಂದಾಜಿಸಿದೆ.
ಆಗಸ್ಟ್ 19ರಂದು ಗುಜರಾತ್, ಮಹಾರಾಷ್ಟ್ರ, ಒಡಿಶಾ, ಜಾರ್ಖಂಡ್, ಪಶ್ಚಿಮ ಬಂಗಾಳದಲ್ಲಿ ಮಳೆಯಾಗುತ್ತದೆ. ಆಗಸ್ಟ್ 19ರಿಂದ 20ರವರೆಗೂ ತೆಲಂಗಾಣ, ಆಗಸ್ಟ್ 19ರಂದು ಛತ್ತೀಸ್‌ಗಡದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿಗೆ ಆರೆಂಜ್ ಅಲರ್ಟ್ ಘೋಷಣೆ:
ಈ ಮಧ್ಯೆ, ಶುಕ್ರವಾರ ದೆಹಲಿಗೆ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ದೇಶದ ರಾಜಧಾನಿಯಲ್ಲಿ ಆಗಸ್ಟ್ ತಿಂಗಳಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದೆ. ಈ ತಿಂಗಳು ಸಾಮಾನ್ಯಕ್ಕಿಂತ, ಅಂದರೆ 157.1 ಎಂಎಂಗಿಂತ 63.2 ಎಂಎಂ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಹತ್ತು ದಿನಗಳಲ್ಲಿ ದೆಹಲಿಯಲ್ಲಿ ಉತ್ತಮ ಮಳೆಯಾಗಿದೆ ಎಂದು ತಿಳಿಸಿದೆ.
ಇದೀಗ ದೆಹಲಿಯಲ್ಲಿ ಮತ್ತೆ ಮಳೆ ಆರಂಭವಾಗಲಿದೆ ಎಂದು ಮುನ್ಸೂಚನೆ ನೀಡಿ ಅಲರ್ಟ್ ಘೋಷಣೆ ಮಾಡಿದೆ.
ಜುಲೈ ತಿಂಗಳಿನಲ್ಲಿ ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಪ್ರವಾಹ ಸ್ಥಿತಿ ಎದುರಾಗಿತ್ತು. ದೆಹಲಿಯಲ್ಲಿ ಜುಲೈ ತಿಂಗಳಿನಲ್ಲಿ 507.1 ಎಂಎಂ ಮಳೆ ದಾಖಲಾಗಿತ್ತು. ಇದು ಸಾಮಾನ್ಯಕ್ಕಿಂತ 141% ಅಧಿಕವಾಗಿತ್ತು. 2003ರ ನಂತರ ಜುಲೈ ತಿಂಗಳಿನಲ್ಲಿ ದಾಖಲಾದ ಅತಿ ಹೆಚ್ಚಿನ ಮಳೆ ಪ್ರಮಾಣವಾಗಿತ್ತು.
ದಕ್ಷಿಣ ಭಾರತದಲ್ಲಿಯೂ ಮಳೆ ಪ್ರಮಾಣ ಹೆಚ್ಚಳ
ಆಗಸ್ಟ್ ತಿಂಗಳಿನಲ್ಲಿ ವಿರಾಮದ ನಂತರ ದಕ್ಷಿಣ ಭಾರತದಲ್ಲಿ ಮತ್ತೆ ಮುಂಗಾರು ಚಟುವಟಿಕೆ ಆರಂಭವಾಗಲಿದೆ. ಮಳೆ ಬಿರುಸುಪಡೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದೊಂದಿಗೆ ಮುಂಗಾರು ಕೂಡ ಮತ್ತೆ ಚುರುಕು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ನಿರ್ದೇಶಕ ಮೃತ್ಯುಂಜಯ ಮಹೋಪಾತ್ರ ತಿಳಿಸಿದ್ದಾರೆ.
ಜುಲೈ ದ್ವಿತೀಯಾರ್ಧದಲ್ಲಿ ಭಾರೀ ಮಳೆಯಾದ ನಂತರ ದೇಶದ ಹಲವು ರಾಜ್ಯಗಳಲ್ಲಿ ಮಳೆ ಚಟುವಟಿಕೆ ಕ್ಷೀಣಿಸಿತ್ತು. ಇದೀಗ ಮತ್ತೆ ಚುರುಕುಗೊಳ್ಳಲಿರುವುದಾಗಿ ಇಲಾಖೆ ಮುನ್ಸೂಚನ ನೀಡಿದೆ.
ಆಂಧ್ರದ ಕರಾವಳಿ ತೀರಗಳು, ತೆಲಂಗಾಣ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಮತ್ತೆ ಮಳೆ ಆರಂಭವಾಗಲಿದೆ ಎಂದು ಐಎಂಡಿ ತಿಳಿಸಿದೆ.
ದೇಶದಲ್ಲಿ ಮುಂಗಾರು ಪ್ರಭಾವ ಮುಂದುವರೆದಿದ್ದು, ಪಶ್ಚಿಮ ಬಂಗಾಳ, ಒಡಿಶಾ, ಬಿಹಾರ, ಜಾರ್ಖಂಡ್, ಆಂಧ್ರದ ಕರಾವಳಿ ಪ್ರದೇಶಗಳು, ತೆಲಂಗಾಣ, ಮಧ್ಯಪ್ರದೇಶ, ಛತ್ತೀಸ್‌ಗಡ ಹಾಗೂ ವಿದರ್ಭಾದಲ್ಲಿ ಕೆಲವು ದಿನಗಳ ಕಾಲ ಮಳೆಯಾಗುವುದಾಗಿ ಮಾಹಿತಿ ನೀಡಿದೆ.